ಕರಾವಳಿಯ ಜನರನ್ನು ಒಂದು ಗೂಡಿಸುವ, ಮಾನವೀಯತೆಯನ್ನು ಎತ್ತಿ ಹಿಡಿಯುವ ಉತ್ಸವವಾಗಲಿ : ಪ್ರಕಾಶ್ ರೈ
ದ.ಕ ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ

ಮಂಗಳೂರು, ಡಿ. 22: ಕರಾವಳಿಯ ಉತ್ಸವ ಎಲ್ಲರನ್ನು ಒಂದು ಗೂಡಿಸುವ ಮಾನವೀಯತೆಯನ್ನು ಎತ್ತಿಹಿಡಿಯುವ ಉತ್ಸವವಾಗಬೇಕು ಎಂದು ಖ್ಯಾತ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಶುಭ ಹಾರೈಸಿದರು.
ಇಂದಿನಿಂದ ಒಂದು ವಾರ ನಡೆಯಲಿರುವ ಕರಾವಳಿ ಉತ್ಸವಕ್ಕೆ ಮಂಗಳಾ ಕ್ರೀಡಾಂಗಣದ ಬಳಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ತೆಂಗಿನ ಹೂವಿನ ಗರಿ ಬಿಡಿಸಿ ಚಾಲನೆ ನೀಡಿ ಮಾತನಾಡಿದರು.
ಹಲವಾರು ಭಾಷೆ ಸುಂದರ ಪರಿಸರವನ್ನು ಹೊಂದಿರುವ ನಾಡಿನಲ್ಲಿ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಟ್ಟು, ಎಳೆಯ ಮಕ್ಕಳ ಮನಸ್ಸಿನಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆಯಬಾರದು. ಸಮಾಜದ ಎಲ್ಲಾ ಜನರು ಭಯ ಮುಕ್ತರಾಗಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನ ಒಳಗೂ ಉತ್ಸವ ನಡೆಯಬೇಕು ಆಗ ಉತ್ಸವ ಅರ್ಥಪೂರ್ಣ ವಾಗುತ್ತದೆ. ದೇವರು, ಧರ್ಮ ನಮ್ಮ ಸಮಾಜದ ನಮ್ಮ ಜನರ ಅಭಿವೃದ್ಧಿಗೆ ಸಹಕಾರಿಯಾಗಬೇಕು ಅದು ಮನುಷ್ಯರನ್ನು ವಿಂಗಡಿಸುವಂತಾಗಬಾರದು. ಯಾರೇ ಸತ್ತರೂ ನಮಗೆ ನೋವಾಗಬೇಕು. ಪ್ರಕೃತಿಗೆ ವಿರೋಧವಾದ ಕೆಲಸಗಳಿಂದ ದೂರವಿರೋಣ. ಪ್ರಕೃತಿಯೊಂದಿಗೆ ಹೇಗೆ ಬಾಳ ಬೇಕು ಎಂದು ನಮ್ಮ ಹಿರಿಯರು ನಮಗೆ ಕಲಿಸಿ ಕೊಟ್ಟಿದ್ದಾರೆ. ದೈವ ದೇವರ ಹೆಸರಿನಲ್ಲಿ ಪರಿಸರವನ್ನು ಸಂರಕ್ಷಿಸುವ ಕೆಲಸ ಮಾಡಿದ್ದಾರೆ. ಏನನ್ನಾದರೂ ಕಡಲಿಗೆ ಎಸೆದರು ತನ್ನಲ್ಲಿ ಇಟ್ಟು ಕೊಳ್ಳದೆ ಅದನ್ನು ದಡಕ್ಕೆ ಮರಳಿಸುವ ಕಡಲಿನಂತೆ, ನೀರನ್ನು ತೆಗೆದಷ್ಟು ಖಾಲಿಯಾಗದ ಕಡಲಿನಂತೆ ಸಮೃದ್ಧವಾದ ಕರಾವಳಿಯ ಸಂಸ್ಕೃತಿ ಕೋಮುದ್ವೇಷದಿಂದ ವಿಂಗಡಣೆಯಾಗಬಾರದು ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ನಾವು ಮಾನವತಾ ವಾದಿಗಳಾಗಬೇಕು ಎಂದು ಪ್ರಕಾಶ್ ರೈ ಕವಿ ಗೊಪಾಲಕೃಷ್ಣ ಅಡಿಗರ ಕವನವನ್ನು ವಾಚಿಸುವುದರೊಂದಿಗೆ ಕರೆ ನೀಡಿದರು.
ನಾನು ಪ್ರಕಾಶ್ ರೈ... ಸಿನಿಮಾದಲ್ಲಿ ಪ್ರಕಾಶ್ ರಾಜ್ ;- ಕರಾವಳಿಯ ಕೂಸು, ಕನ್ನಡದ ನೆಲದಲ್ಲಿ ಹುಟ್ಟಿದವ :- ಕೆಲವರಿಗೆ ನನ್ನ ಹೆಸರಿನ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ, ಬೈಯುತ್ತಿದ್ದಾರೆ ಅದು ಅವರ ಭಾಷೆ ಅದಕ್ಕಾಗಿ ಅವರಿಗೆ ನಾನು ಉತ್ತರಿಸುತ್ತೇನೆ ನಾನು ಪ್ರಕಾಶ್ ರೈ, ಸಿನಿಮಾದಲ್ಲಿ ಪ್ರಕಾಶ್ ರಾಜ್. ನನ್ನ ಹೆಸರಿನ ಬಗ್ಗೆ ಪ್ರಶ್ನೆ ಕೇಳುವ ವ್ಯಕ್ತಿ ಕನ್ನಡದ ರಾಜ್ ಕುಮಾರ್ ಅವರ ಹೆಸರು ಮುತ್ತುರಾಜ್, ತಮಿಳಿನ ರಜನಿ ಕಾಂತ್ ಅವರ ಹೆಸರು ಶಿವಾಜಿ ರಾವ್ ಗಾಯಕ್ ವಾಡ್ ಅವರ ಹೆಸರು ಏಕೆ ಹಾಗಿವೆ ಎಂದು ಕೇಳಬೆಕಲ್ಲಾ....?
ನಾನು ಕರಾವಳಿಯ ಕೂಸು ನನ್ನ ತಂದೆ ಇಲ್ಲಿನವರು. ನನ್ನ ತಾಯಿ ಧಾರವಾಡದವರು. ಆದುದರಿಂದ ನಾನು ಕನ್ನಡದ ನೆಲದಲ್ಲಿ ಹುಟ್ಟಿದವ ಎನ್ನುವುದನ್ನು ಮತ್ತೆ ಇಲ್ಲಿಯೇ ನಿಂತು ಹೇಳಬೇಕಾಗಿದೆ. ತಮಿಳರು, ತೆಲುಗರು ಮಲೆಯಾಳಿಗಳು, ಹಿಂದಿ ಭಾಷೆಯ ಜನರು ನನ್ನನ್ನು ಕಲಾವಿದನಾಗಿ ನನ್ನವರು ಎನ್ನುತ್ತಿದ್ದಾರೆ. ಅದೆಲ್ಲಕ್ಕಿಂತಲೂ ನನ್ನ ನೆಲದಲ್ಲಿ ನಾನು ಇಲ್ಲಿಯವ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಪರೋಕ್ಷವಾಗಿ ತನ್ನನ್ನು ಸಾಮಾಜಿಕ ಜಾಲ ತಾಣದಲ್ಲಿ ಟೀಕಿಸಿದ ಸಂಸದರೊಬ್ಬರಿಗೆ ಕರಾವಳಿ ವೇದಿಕೆಯಲ್ಲಿ ಪ್ರಕಾಶ್ ರೈ ಉತ್ತರ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ವಸ್ತು ಪ್ರದರ್ಶನ ಮಳಿಗೆಯನ್ನು ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ ಮಾತನಾಡುತ್ತಾ ಕರಾವಳಿಯ ಕಲೆ, ಸಂಸ್ಕೃತಿಗೆ ಕೊಡುಗೆ ನೀಡಿದ ಸಾಹಿತಿಗಳು ಕವಿಗಳನ್ನು ಸ್ಮರಿಸಿಕೊಂಡರು. ಶ್ರೀನಿವಾಸ ಮಲ್ಯರಂತಹ ವ್ಯಕ್ತಿಗಳು ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಕರಾವಳಿಯ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರಾವಳಿಯಲ್ಲಿ ರಾತ್ರಿ ಹಳ್ಳಿಗೆ ಹೋದರೆ ಸಾಕು ಎಲ್ಲಾ ಕಡೆ ಒಂದಲ್ಲಾ ಒಂದು ಸಮಾರಂಭ ಇರುತ್ತದೆ. ಜಾತ್ರೆ, ಉರೂಸ್, ಚರ್ಚ್‌ಗಳ ಸಮಾರಂಭಗಳು ನಡೆಯುತ್ತಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರಿನ ಎಲ್ಲಾ ಜನ ಸೇರುವ ವಾತವರಣ ಇತ್ತು ಅದು ಇನ್ನೂ ಮುಂದುವರಿಯಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು ಕರಾವಳಿ ಉತ್ಸವ ಜಿಲ್ಲೆಯ ಜನರ ಸೌರ್ಹಾದತೆಯ ಉತ್ಸವವಾಗಲಿ ಎಂದು ಹಾರೈಸಿದರು.
ಸಮಾರಮಭದಲ್ಲಿ ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿ, ಪೊಲೀಸ್ ಕಮಿಷನರ್ ಸುರೇಶ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ .ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕಲೆ ಮತ್ತು ಸಂಸ್ಕೃತಿ ಜನರನ್ನು ಒಂದು ಗೂಡಿಸಬೇಕು: ಯು.ಟಿ.ಖಾದರ್
ಕರಾವಳಿಯ ಕಲೆ, ಸಂಸ್ಕೃತಿ ಇಲ್ಲಿನ ಜನರನ್ನು ಒಂದುಗೂಡಿಸುವ ಉತ್ತಮ ನಾಗರಿಕರನ್ನಾಗಿ ಮಾಡುವ ಶಕ್ತಿಯನ್ನು ಪಡೆದಿದೆ. ಈ ಕೆಲಸ ಮುಂದುವರಿಯಲಿ ಎನ್ನುವ ಆಶಯದೊಂದಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರಾವಳಿ ಉತ್ಸವವನ್ನು ಹಮಿಮಕೊಳ್ಳಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಇಂದು ನಗರದ ನೆಹರು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡ ಕರಾವಳಿ ಉತ್ಸವ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕರಾವಳಿಯ ಶಿಕ್ಷಣ ಹಾಗೂ ಕಲೆ,ಸಂಸ್ಕೃತಿ ಇಂದು ಜಗತ್ ಪ್ರಸಿದ್ಧಿಯನ್ನು ಪಡೆದಿದೆ.ಯಾವೂದೇ ದೇಶ ಅಥವಾ ಪ್ರದೇಶ ನುಡಿ ಮತ್ತು ಕಲೆಯನ್ನು ಉಳಿಸಿಕೊಳ್ಳದೆ ಹೋದರೆ ತನ್ನ ಸತ್ವವನ್ನು ಕಳೆದು ಕೊಂಡತೆ ಈ ಹಿನ್ನೆಲೆಯಲ್ಲಿ ಕರಾವಳಿ ಉತ್ಸವ ಕರಾವಳಿಯ ಕಲೆ,ಕಲಾವಿದರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಡೆಗಳ ಕಾಲವಿದರು ಹಾಗೂ ಕರಾವಳಿಯ ಕಾಲವಿದರು ಸೇರಿದಂತೆ 72 ತಂಡಗಳು ಭಾಗವಹಿಸಿದ್ದವು,ಕರಾವಳಿಯ ಹುಲಿ ವೇಶ,ಗಜಮೇಳ,ಡೋಲು ವಾದಕರ ತಂಡ,ಕರ್ನಾಟಕದ ವೀರಗಾಸೆ,ಸೋಮನ ಕುಣಿತ,ಪಟ ಕುಣಿತ,ಗೊಂಬೆ ಕುಣಿತ ,ಕಾಸರಗೋಡಿನ ಕಲಾತಂಡಗಳ ಪ್ರದರ್ಶನ ತಮ್ಮ ಪ್ರದರ್ಶನ ನೀಡಿ ನೆಹರು ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡರು.







