ಶಾಲಾ ಪ್ರವಾಸದ ಬಸ್-ರಿಕ್ಷಾ ಢಿಕ್ಕಿ: 24 ವಿದ್ಯಾರ್ಥಿಗಳ ಸಹಿತ 30 ಮಂದಿಗೆ ಗಾಯ
ತುಮಕೂರಿನ ಶಾಲಾ ಮಕ್ಕಳು; ಆರು ಮಂದಿಗೆ ಗಂಭೀರ ಗಾಯ

ಕಾರ್ಕಳ, ಡಿ.22: ಶಾಲಾ ಪ್ರವಾಸದ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ 24 ಮಕ್ಕಳ ಸಹಿತ 30 ಮಂದಿ ಗಾಯಗೊಂಡ ಘಟನೆ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದಲ್ಲಿರುವ ದೇವಿಕೃಪಾ ಸಭಾಂಗಣದ ಬಳಿ ಇಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮಾರಮ್ಮ ದೇವ್ರ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿದ್ದ ಬಸ್ ಮತ್ತು ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ. ಶಾಲೆಯಿಂದ ಖಾಸಗಿ ಬಸ್‌ನಲ್ಲಿ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳು ಭಟ್ಕಳ, ಕೊಲ್ಲೂರು, ಉಡುಪಿಯಲ್ಲಿ ಸುತ್ತಾಡಿ ಕಾರ್ಕಳಕ್ಕೆ ಆಗಮಿಸಿದ್ದರು. ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಬಸ್ ಕಾರ್ಕಳದಿಂದ ಸುಮಾರು 6 ಕಿ.ಮೀ. ದೂರ ತಲುಪಿದಾಗ ಆ ಅಪಘಾತ ಸಂಭವಿಸಿದೆ. ರಿಕ್ಷಾ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಉರುಳಿ ಬಿದ್ದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರ ಚಾಲಕ ಗುಂಡ್ಯಡ್ಕ ನಿವಾಸಿ ಸುಧಾಕರ ಹಾಗೂ ಮಹಿಳಾ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬಸ್ ರಿಕ್ಷಾ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿಯಾಗಿ ನಿಂತಿದೆ. ಬಸ್ ಚಾಲಕ ಮೊಹ್ಸಿನ್(27) ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಬಸ್‌ನಲ್ಲಿ 61 ವಿದ್ಯಾರ್ಥಿಗಳು ಹಾಗೂ 8 ಶಿಕ್ಷಕರಿದ್ದರು. ರಿಕ್ಷಾದಲ್ಲಿ ಇಬ್ಬರು ಮಕ್ಕಳ ಸಹಿತ ಮಹಿಳೆಯೊಬ್ಬರಿದ್ದರು. ಈ ಪೈಕಿ 24 ವಿದ್ಯಾರ್ಥಿಗಳ ಸಹಿತ ಒಟ್ಟು ಮೂವತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್‌ನಲ್ಲಿದ್ದ ಉಳಿದ ಪ್ರಯಾಣಿಕರಿಗೆ ಕಾರ್ಕಳದ ಗೊಮ್ಮಟೇಶ್ವರದ ಬಳಿಯಿರುವ ಯಾತ್ರಿ ನಿವಾಸದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಘಟನೆಯ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





