ಗಾಲಿಗಳ ಮೇಲೆ ಕ್ರಿಸ್ಮಸ್ ಸಂದೇಶ ಸಾರಿದ ಶಂಕರಪುರ ಚರ್ಚಿನ ಕಲಾವಿದರು

ಶಿರ್ವ, ಡಿ.23: ಶಂಕರಪುರ ಸಂತ ಯೋವಾನ್ನರ ದೇವಾಲಯದ ಕಲಾ ವಿದರು ಬೃಹತ್ ಗಾತ್ರದ ಎರಡು ಟ್ರಕ್ಕುಗಳಲ್ಲಿ ಯೇಸುವಿನ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ನಟಿಸುವ ಮೂಲಕ ಶಂಕರಪುರ ಮತ್ತು ಶಿರ್ವ ಪರಿಸರದ ಜನತೆಗೆ ಸಾರಿದರು.
ಶಂಕರಪುರ ಚರ್ಚಿನ ಸಹಾಯಕ ಧರ್ಮಗುರು ವಂ.ರೋಯ್ಸನ್ ಫೆರ್ನಾಂಡಿಸ್ ನೇತೃತ್ವದಲ್ಲಿ ರಚಿಸಿ ನಿರ್ದೇಶಿಸಿದ ‘ಕ್ರಿಸ್ತ ಕಾರುಣ್ಯ’ ಎಂಬ ಕಿರು ಪ್ರಹಸನವನ್ನು ಸುಮಾರು 60ಕ್ಕೂ ಅಧಿಕ ನಟ ನಟಿಯರು ಬೃಹತ್ ಟ್ರಕ್ಕುಗಳಲ್ಲಿ ನಿರ್ಮಿಸಿದ ವಿಶೇಷ ವೇದಿಕೆಯಲ್ಲಿ ಪ್ರದರ್ಶಿಸಿದರು. ವಿಶೇಷ ವೇಷಭೂಷಣ, ಲೈಟಿಂಗ್ ವ್ಯವಸ್ಥೆಯಲ್ಲಿ ಏಕಕಾಲದಲ್ಲಿ ಯೇಸುವಿನ ಜನನದ ಸಂದೇಶದೊಂದಿಗೆ ಅದರ ಅರ್ಥವನ್ನು ನೆರೆದವರಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಲಾಯಿತು.
ಸುಮಾರು 25 ನಿಮಿಷಗಳ ರೂಪಕವನ್ನು ಮೊದಲು ಶಿರ್ವ ಪೇಟೆಯಲ್ಲಿ, ಬಳಿಕ ಶಂಕರಪುರ ಚರ್ಚಿನ ಎದುರುಗಡೆ ಪ್ರದರ್ಶಿಸಲಾಯಿತು. ಟ್ಯಾಬ್ಲೊದಲ್ಲಿ ಹಾಡು, ನೃತ್ಯ, ಸಾಂತಾಕ್ಲಾಸ್, ನಟನೆ ಪ್ರತಿಯೊಂದನ್ನು ಕೂಡ ಕಲಾವಿದರು ಪ್ರದರ್ಶಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಚರ್ಚಿನ ಭಾರತೀಯ ಕೆಥೊ ಲಿಕ್ ಯುವ ಸಂಚಾಲನದ ಸದಸ್ಯರುಗಳು ವಹಿಸಿದ್ದರು.
‘ಕ್ರಿಸ್‌ಮಸ್ ಹಬ್ಬ ಎಂಬುದು ಕೇವಲ ಬಾಹ್ಯ ಆಚರಣೆಗೆ ಸೀಮಿತವಾಗಿದ್ದು, ಪ್ರಭು ಕ್ರಿಸ್ತರು ಜಗತ್ತಿಗೆ ಸಾರಿದ ಸುವಾರ್ತೆಯ ನೆನಪು ಈ ಲೋಕಕ್ಕೆ ಮರೆತು ಹೋಗಿದೆ. ನಿಜವಾದ ಕ್ರಿಸ್ಮಸ್ ತನ್ನ ಆಚರಣೆಯ ಮಹತ್ವವನ್ನು ಕಳೆದು ಕೊಳ್ಳು ತ್ತಿದೆ. ಓರ್ವ ಮುದಿ ಭಿಕ್ಷುಕ ಬಾಲಕನೋರ್ವನಿಗೆ ಕ್ರಿಸ್‌ಮಸ್ ಮಹತ್ವವನ್ನು ಹಾಗೂ ನಿಜವಾದ ಆಚರಣೆಯನ್ನು ತಿಳಿಹೇಳುವ ಪ್ರಯತ್ನ ರೂಪಕದಲ್ಲಿ ಮಾಡಲಾಗಿದೆ ಎಂದು ವಂ.ರೋಯ್ಸನ್ ಫೆರ್ನಾಂಡಿಸ್ ತಿಳಿಸಿದ್ದಾರೆ.







