‘ಟಾಫಿಕ್ ಜಾಮ್’ ಬಗ್ಗೆ ಅಧ್ಯಯನ: ಟಿ.ಆರ್. ಸುರೇಶ್
ಪೊಲೀಸ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು, ಡಿ.22: ನಗರದ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಬಸ್ ನಿಲುಗಡೆ ತಾಣಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಆ ಬಸ್ ತಂಗುದಾಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ನಗರದ ಬೆಂದೂರ್‌ವೆಲ್ ಜಂಕ್ಷನ್, ಬಲ್ಮಠ ವೃತ್ತ ಮತ್ತಿತರ ಕೆಲವು ಕಡೆಗಳಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪಿ.ವಿ.ಎಸ್. ಜಂಕ್ಷನ್‌ನಲ್ಲಿ ‘ಫ್ರೀ ಲ್‌ಟೆ’ಗೆ ಅವಕಾಶವಿದ್ದರೂ ಚಾಲಕರು ಅಲ್ಲಿ ಬಸ್‌ಗಳನ್ನು ರಸ್ತೆಯಲ್ಲಿ ಅಡ್ಡ ಇಟ್ಟು ಇತರ ವಾಹನಗಳು ಮುಂದೆ ಹೋಗದಂತೆ ತಡೆಯನ್ನುಂಟು ಮಾಡುತ್ತಿದ್ದಾರೆ. ಸಿಗ್ನಲ್ ವ್ಯವಸ್ಥೆ ಇದ್ದರೂ ರೆಡ್ ಸಿಗ್ನಲ್ ಬಿದ್ದಾಗ ಸವಾರರು ವಾಹನ ನಿಲ್ಲಿಸದೆ ಸಿಗ್ನಲ್ ಜಂಪ್ ಮಾಡುತ್ತಾರೆ. ಇದರಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ಸಿಗುತ್ತಿಲ್ಲ. ಸ್ಥಳದಲ್ಲಿರುವ ಟ್ರಾಫಿಕ್ ಪೊಲೀಸರೂ ಕೂಡ ಏನೂ ಮಾಡುತ್ತಿಲ್ಲ. ಬಲ್ಮಠ ಮತ್ತು ಕಂಕನಾಡಿಗಳಲ್ಲಿ ರಸ್ತೆ ಬದಿ ದೊಡ್ಡ ಗಾತ್ರದ ಕಾರುಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಉರ್ವ ಚಿಲಿಂಬಿಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಬ್ಯಾರಿಕೇಡ್ ಬದಲು ಹಂಪ್ ನಿರ್ಮಾಣ ಮಾಡಬೇಕು ಎಂಬ ಸಲಹೆ ಕೇಳಿ ಬಂತು. ಅತ್ತಾವರದ ಬಿಗ್ ಬಜಾರ್ ಬಳಿ ಶಂಕರ ವಿಠಲ್ ಸಂಸ್ಧೆಯ ಎದುರು ಸಾರ್ವಜನಿಕ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗಳು ಸೆಕ್ಯುರಿಟಿ ಸಂಸ್ಥೆಯ ಮುಖಾಂತರ ‘ನೋ ಪಾರ್ಕಿಂಗ್’ ಬೋರ್ಡ್ ಹಾಕಿಸಿ ವಾಹನ ನಿಲುಗಡೆಗೆ ಅಡ್ಡಿ ಪಡಿಸಿದ್ದಾರೆ. ವಾಹನವನ್ನು ನಿಲ್ಲಿಸಿದರೆ ಅದಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು.
ಈ ಬಗ್ಗೆ ಲಿಖಿತವಾಗಿ ದೂರು ಕೊಟ್ಟರೆ ಅವರ ಮೇಲೆ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ ಕಮಿಷನರ್ ‘ನೋ ಪಾರ್ಕಿಂಗ್‘ ಬೋರ್ಡ್ ಹಾಕಿದವರ ಮತ್ತು ವಾಹನಗಳಿಗೆ ಹಾನಿ ಎಸಗಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಆಟೊ ರಿಕ್ಷಾಗಳ ಚಾಲಕರು ಹೆಚ್ಚುವರಿ ಬಾಡಿಗೆ ಕೇಳುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದೂರು ಸಲ್ಲಿಸಿದರು. ಈ ಬಗ್ಗೆ ಆಟೊ ರಿಕ್ಷಾದ ನಂಬರ್ ಪ್ಲೇಟ್ ಸಮೇತ ಮೊಬೈಲ್‌ನಲ್ಲಿ ಫೋಟೊ ತೆಗೆದು ‘ಕುಡ್ಲ ಟ್ರಾಫಿಕ್’ವಾಟ್ಸ್‌ಆ್ಯಪ್‌ಗೆ (9480802312) ಕಳುಹಿಸುವಂತೆ ಕಮಿಷನರ್ ಸಲಹೆ ಮಾಡಿದರು.
66ನೆ ಇನ್ ಕಾರ್ಯಕ್ರಮದಲ್ಲಿ 27 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ , ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಸುರೇಶ್ ಕುಮಾರ್, ಮಂಜುನಾಥ್, ಎಸ್ಸೈ ಸುಕುಮಾರ್, ಎಎಸ್ಸೈ ಯೂಸ್ು, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.







