ಒತ್ತುವರಿಯಾದ ವಕ್ಫ್ ಆಸ್ತಿ ಮರಳಿ ಪಡೆಯಲು ಹೋರಾಟ ಸಮಿತಿ ರಚನೆ
ಚಿಂತನ-ಮಂಥನ ಸಭೆಯಲ್ಲಿ ತೀರ್ಮಾನ
ಮಂಗಳೂರು, ಡಿ.22: ಜಿಲ್ಲೆಯಲ್ಲಿ ಒತ್ತುವರಿ ಆಗಿದೆ ಎನ್ನಲಾದ ವಕ್ಫ್ ಆಸ್ತಿಯನ್ನು ಮರಳಿ ಪಡೆಯುವ ಸಲುವಾಗಿ ದ.ಕ. ಜಿಲ್ಲಾ ಮಟ್ಟದಲ್ಲಿ ರಾಜಕೀಯ ರಹಿತ ಹೋರಾಟ ಸಮಿತಿಯೊಂದನ್ನು ರಚಿಸಲು ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಶುಕ್ರವಾರ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ವೇದಿಕೆಯಲ್ಲಿ ಯಾವುದೇ ಬ್ಯಾನರ್ ಇಲ್ಲದೆ ನಡೆದ ಈ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡು ಅಭಿಪ್ರಾಯ,ಅನಿಸಿಕೆ ವ್ಯಕ್ತಪಡಿಸಿದರು. ದ.ಕ.ಜಿಲ್ಲೆಯಲ್ಲಿ ಒತ್ತುವರಿಯಾದ ವಕ್ಫ್ ಆಸ್ತಿಯ ಪಟ್ಟಿಯ ಕರಪತ್ರವನ್ನು ಸಿದ್ಧಪಡಿಸಿ ಎಲ್ಲ ಮಸೀದಿಗಳಿಗೆ ರವಾನಿಸಿ ಜಾಗೃತಿ ಮೂಡಿಸಲು ಸುರತ್ಕಲ್‌ನ ಮುಸ್ತಫಾ ಸಲಹೆ ನೀಡಿದರು.
ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರತಿನಿಧಿಯಾಗಿ ಭಾಗವಹಿಸಿದ ನ್ಯಾಯವಾದಿ ಮುಹಮ್ಮದ್ ಹನೀಫ್ ಯು. ಬಂದರ್‌ನ ಮಸೀದಿಯೊಂದಕ್ಕೆ ಸೇರಿದ ವಕ್ಫ್ ಆಸ್ತಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಕಬಳಿಸಿ ವಸತಿ ಸಮುಚ್ಚಯ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ನಡೆಯುವ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿ ತಾನು ಸಲ್ಲಿಸಿದ ವರದಿಗೆ ಈಗಲೂ ಬದ್ಧನಾಗಿದ್ದೇನೆ. ನನ್ನ ವರದಿಯಲ್ಲಿ ತಪ್ಪಿದ್ದರೆ ಗಲ್ಲು ಶಿಕ್ಷೆಗೊಳಗಾಗಲೂ ಸಿದ್ಧ ಎಂದರು.
ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ತನ್ನದು ರಾಜಕೀಯ ರಹಿತ ಹೋರಾಟ. ಈ ಹೋರಾಟಕ್ಕೆ ಯಾರಾದರು ನೇತೃತ್ವ ನೀಡಲು ಮುಂದೆ ಬಂದರೆ ವಹಿಸಿಕೊಡಲು ಸಿದ್ಧ. ಅನಿವಾರ್ಯವಾದರೆ ತಾನು ಬಿಜೆಪಿಗೆ ರಾಜೀನಾಮೆ ನೀಡುವೆ ಎಂದು ಘೋಷಿಸಿದರು.
ವೇದಿಕೆಯಲ್ಲಿ ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ, ನಯಾಝ್ ಅಹ್ಮದ್, ಷಾ ನವಾಝ್, ಯೂಸುಫ್ ವಕ್ತಾರ್, ಡಾ. ಮುನೀರ್ ಬಾವಾ, ನದೀಮ್, ಮುಹಿಯ್ಯುದ್ದೀನ್ ಉಪಸ್ಥಿತರಿದ್ದರು.







