ಕ್ಯಾಟಲೋನಿಯ ಚುನಾವಣೆ: ಪ್ರತ್ಯೇಕತಾವಾದಿಗಳಿಗೆ ಜಯ
ಬಾರ್ಸಿಲೋನ (ಸ್ಪೇನ್), ಡಿ. 22: ಸ್ಪೇನ್‌ನಿಂದ ಪ್ರತ್ಯೇಕಗೊಳ್ಳಲು ಹೊರಟಿರುವ ಕ್ಯಾಟಲೋನಿಯ ವಲಯದಲ್ಲಿ ಗುರುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಪ್ರತ್ಯೇಕತಾವಾದಿಗಳು ಜಯಗಳಿಸಿದ್ದಾರೆ. ಇದರೊಂದಿಗೆ ಈ ವಲಯದ ಬಿಕ್ಕಟ್ಟು ಮತ್ತಷ್ಟು ಅನಿಶ್ಚಿತತೆಯತ್ತ ಸಾಗಿದೆ.
ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ ಹಾಗೂ 99.9 ಶೇಕಡ ಮತಗಳ ಎಣಿಕೆ ಸಮಾಪ್ತಿಯಾಗಿದೆ. ಪ್ರತ್ಯೇಕತಾವಾದಿ ನಾಯಕರು ಹೊರ ದೇಶಗಳಿಂದ ಹಾಗೂ ಜೈಲುಗಳಿಂದ ಚುನಾವಣಾ ಪ್ರಚಾರ ಮಾಡಿದ ಹೊರತಾಗಿಯೂ, ಅವರೇ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
‘‘ಇದು ಯಾರೂ ನಿರಾಕರಿಸಲಾಗದ ಫಲಿತಾಂಶ’’ ಎಂದು ಕ್ಯಾಟಲನ್‌ನ ಪದಚ್ಯುತ ನಾಯಕ ಕಾರ್ಲ್ಸ್ ಪಿಜ್‌ಮಾಂಟ್ ಬೆಲ್ಜಿಯಂನಿಂದ ಹೇಳಿದ್ದಾರೆ. ಅವರು ಬೆಲ್ಜಿಯಂನಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.
‘‘ಸ್ಪೇನ್ ಸರಕಾರ ಸೋತಿದೆ. ಪ್ರಧಾನಿ ರಜೋಯ್ ಮತ್ತು ಅವರ ಮಿತ್ರಪಕ್ಷಗಳು ಸೋತಿದ್ದಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಕ್ಯಾಟಲೋನಿಯ ಸಂಸತ್ತು ಅಕ್ಟೋಬರ್ 27ರಂದು ಸ್ಪೇನ್‌ನಿಂದ ಸ್ವತಂತ್ರಗೊಂಡಿರುವುದಾಗಿ ಘೋಷಣೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಇದರ ಬೆನ್ನಿಗೇ ಕ್ರಮ ತೆಗೆದುಕೊಂಡ ಸ್ಪೇನ್, ಕ್ಯಾಟಲೋನಿಯ ವಲಯಕ್ಕೆ ನೀಡಲಾಗಿರುವ ಸ್ವಾಯತ್ತೆಯನ್ನು ರದ್ದುಪಡಿಸಿತ್ತು ಹಾಗೂ ಚುನಾವಣೆ ಘೋಷಿಸಿತ್ತು.







