ವಿಜಯಪುರ ವಿದ್ಯಾರ್ಥಿನಿಯ ಕೊಲೆ ಪ್ರಕರಣ: ಜೆಡಿಎಸ್ ಪ್ರತಿಭಟನೆ
ಪುತ್ತೂರು, ಡಿ. 22: ವಿಜಯಪುರದಲ್ಲಿ ದಾನಮ್ಮ ಎಂಬ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನುಷ ಘಟನೆಯನ್ನು ಖಂಡಿಸಿ ಪುತ್ತೂರು ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಸೋಮವಾರ ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಐ.ಸಿ.ಕೈಲಾಸ್ ಅವರು ಬಾಲಕಿಯನ್ನು ಅತ್ಯಾಚಾರ ಮಾಡಿರುವ ವ್ಯಕ್ತಿಯು ಬಿಜೆಪಿ ಕಾರ್ಯಕರ್ತನಾಗಿದ್ದಾನೆ ಎಂಬುದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದರಿಂದಾಗಿ ಬಿಜೆಪಿಯ ನಿಜ ಬಣ್ಣ ಜಗಜ್ಜಾಹೀರಾಗಿದೆ ಎಂದರು. ಪರೇಶ್ ಮೇಸ್ತಾ ಸಾವಿನ ವಿಚಾರವಾಗಿ ಇಡೀ ಹೊನ್ನಾವರದಲ್ಲಿ ಬೆಂಕಿ ಹಚ್ಚಿದ ಬಿಜೆಪಿ ಈಗ ಎಲ್ಲಿದೆ. ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್ ಈಗ ಯಾಕೆ ಮೌನಿಗಳಾಗಿದ್ದಾರೆ ಎಂದು ಪ್ರಶ್ನಿಸಿದ ಅವರು ದಲಿತ ಬಾಲಕಿಯಾಗಿರುವ ದಾನಮ್ಮನ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವ್ಯಕ್ತಿಯನ್ನು ನೇಣೆಗೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 3,012 ಅತ್ಯಾಚಾರ ಪ್ರಕರಣಗಳು, 2,534 ಕೊಲೆಗಳು ನಡೆದಿವೆ. ಇದು ಸಿದ್ಧರಾಮಯ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದ ಅವರು ಸಿದ್ಧರಾಮಯ್ಯ ನಿದ್ದರಾಮಯ್ಯ ಆಗುವುದನ್ನು ಬಿಟ್ಟು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಿ. ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಟ್ಟ ವಿಚಾರಗಳನ್ನು, ಓಟು ಬ್ಯಾಂಕ್ ರಾಜಕಾರಣವನ್ನು ಜನತೆ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ಮೂಲಕ ಕರ್ನಾಟಕವನ್ನು ಸುಭೀಕ್ಷೆ ಮಾಡಲಿದೆ ಎಂದರು.
ಜೆಡಿಎಸ್ ಯುವಘಟಕದ ರಾಜ್ಯ ಉಪಾಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಮಾತನಾಡಿ, ದಲಿತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿಯೇ ಬಿಜೆಪಿಗರು ಈಗ ತುಟಿ ಬಿಚ್ಚದೆ ಆರೋಪಿಯನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಜೆಪಿಯವರಿಗೆ ನೈತಿಕತೆ ಇದ್ದರೆ ಈಗ ಬಾಯಿ ಬಿಡಿಲಿ ಎಂದು ಅವರು ಆಗ್ರಹಿಸಿದರು.
ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ, ವಕ್ತಾರ ಬಾಲಚಂದ್ರ ಸೊರಕೆ ಮಾತನಾಡಿದರು. ಜೆಡಿಎಸ್ ಮುಖಂಡರಾದ ಅಬ್ದುಲ್ ರಹಿಮಾನ್ ಯುನಿಕ್, ಪದ್ಮಾ ಮಣಿಯನ್, ಅದ್ದು ಪಡೀಲ್, ವಿಕ್ಟರ್ ಗೋನ್ಸಾಲ್ವೀಸ್, ಶಿವು ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.







