ಬೆಂಗಳೂರು : ಡಿ.24ರಿಂದ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು, ಡಿ.22: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನನಿಂದ 12 ನೆ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.24 ಮತ್ತು 25 ರಂದು ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶೃಂಗೇಶ್ವರ, ಅಂದು ಬೆ.7 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ಪುಣ್ಯಭೂಮಿಯ ಬಳಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಆರಂಭವಾಗಲಿದ್ದು, ಮೇಯರ್ ಸಂಪತ್‌ರಾಜ್ ಹಾಗೂ ಜಯ ಕರ್ನಾಟಕ ಸಂಘದ ಮುಖಂಡ ಮುತ್ತಪ್ಪರೈ ಚಾಲನೆ ನೀಡಲಿದ್ದಾರೆ. ಇದು ನಗರದ ವರ್ತುಲ ರಸ್ತೆ, ನಾಯಂಡಹಳ್ಳಿ, ಜೆ.ಪಿ.ನಗರ, ಸಿಲ್ಕ್ ಬೋರ್ಡ್ ಹಾಗೂ ಹೊಸೂರು ರಸ್ತೆ ಮೂಲಕ ಚಂದಾಪುರಕ್ಕೆ ತಲುಪಲಿದೆ ಎಂದು ವಿವರಿಸಿದರು.
ಅನಂತರ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದು, ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಶಾಸಕ ಬಿ.ಶಿವಣ್ಣ, ಕಸಾಪ ಜಿಲ್ಲಾಧ್ಯಕ್ಷ ಮಾಯಣ್ಣ, ಸಾಹಿತಿ ಜರಗನಹಳ್ಳಿ ಶಿವಶಂಕರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ‘ವಿಜಯ ದುಂದುಭಿ’ ಸ್ಮರಣ ಸಂಚಿಕೆ ೋಕಾರ್ಪಣೆ ಮಾಡಲಿದ್ದಾರೆ ಎಂದರು.
ಎರಡನೇ ದಿನ ಬೆಂಗಳೂರು ಮತ್ತು ಪರಿಸರ ವಿಷಯ ಕುರಿತು ಪರಿಸರವಾದಿ ಶಿವಮಲ್ಲು, ಬೆಂಗಳೂರಿನಲ್ಲಿ ಕನ್ನಡ ಮತ್ತು ಸಾಹಿತ್ಯ ಸಂಘಟನೆ ಕುರಿತು ಉಪನ್ಯಾಸಕ ಎಸ್.ರಾಮಲಿಂಗೇಶ್ವರ, ಆರೋಗ್ಯ ಸ್ಥಿತಿಗತಿ ಕುರಿತು ವೈದ್ಯ ಡಾ.ರವಿ. ಬಿ.ನಾಗರಾಜಯ್ಯ, ಪೊಲೀಸ್, ನಾಗರಿಕರು ಹಾಗೂ ಕನ್ನಡ ಕುರಿತು ಉಪ ಪೊಲೀಸ್ ಅಧಿಕಾರಿ ವಿ.ಶಿವಕುಮಾರ್ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ ವಿದ್ಯಾರ್ಥಿ ಕವಿಗೋಷ್ಠಿ, ಸಂಜೆ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ನಾಗತಿ ಹಳ್ಳಿ ರಮೇಶ್, ಡಾ.ಕೂಡ್ಲೂರು ವೆಂಕಟಪ್ಪ ಸೇರಿದಂತೆ ಹಲವರು ಪಾಲ್ಗೊ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೊರೇವಣ್ಣ, ಕೃಷ್ಣನಾಯಕ್, ಪ್ರೊ.ಟಿ.ಶ್ರೀನಿವಾಸಮೂರ್ತಿ, ಡಾ.ಆರ್.ಕೋಮಲ ಸೇರಿದಂತೆ 40 ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಸಕ ಅರವಿಂದ ಲಿಂಬಾವಳಿ, ಪತ್ರಕರ್ತ ಕೌಡ್ಲೆ ಚನ್ನೇಗೌಡ, ವಕೀಲ ಸಿ.ಎಚ್.ಹನುಮಂತರಾಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.







