ಕೆದಿಲ: ಮನೆಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ
ಪುತ್ತೂರು, ಡಿ. 22: ಮನೆಯೊಂದಕ್ಕೆ ನುಗ್ಗಿದ ಮೂವರು ಆಗಂತುಕರು ಮನೆಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದೋಚಿ ಪರಾರಿಯಾದ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಕೆದಿಲ ಎಂಬಲ್ಲಿ ಇಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ಕೆದಿಲದ ಶಿವಶಂಕರ ಪುತ್ತುರಾಯ ಎಂಬವರ ಮನೆಯಿಂದ ಈ ದರೋಡೆ ನಡೆದಿದೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮೂವರು ದರೋಡೆ ಕೋರರು ಪುತ್ತುರಾಯ, ಅವರ ಪತ್ನಿ ಹಾಗೂ 17ರ ಹರೆಯದ ಅವರ ಪುತ್ರಿಯನ್ನು ಹಣ, ಒಡವೆ ನೀಡುವಂತೆ ಬೆದರಿಸಿದ್ದಾರೆ. ಇದಕ್ಕೆ ಮಣಿಯದಿದ್ದಾಗ ಮನೆಮಂದಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಪುತ್ತುರಾಯರ ಪತ್ನಿಯ ಕೊರಳಲಿದ್ದ ಚಿನ್ನದ ಸರ ಅಲ್ಲದೆ ಇನ್ನೊಂದು ನೆಕ್ಲೇಸ್ ಮತ್ತು 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಬಳಿಕ ಬೊಬ್ಬೆ ಕೇಳಿ ಆಗಮಿಸಿದ ನೆರೆಕರೆಯವರು ಪುತ್ತುರಾಯರ ಮನೆಯವರ ಪಾರು ಮಾಡಿದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





