ಕೋಮು ಶಕ್ತಿಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್‌ಗೆ ಮತ ನೀಡಿ : ಸಿದ್ದರಾಮಯ್ಯ

ಯಮಕನಮರಡಿ, ಡಿ.22: ಕೋಮು ಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದ ಜನತೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾ ಪ್ರವಾಸದ ಅಂಗವಾಗಿ ಶುಕ್ರವಾರ ಯಮಕನಮರಡಿ ಪಟ್ಟಣದ ಸಿಇಎಸ್ ಪ್ರೌಢಶಾಲಾ ಮೈದಾನದಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ಕೋಮುಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಈ ಶಕ್ತಿಗಳಿಗೆ ಕಡಿವಾಣ ಹಾಕಲು ಮತ್ತೆ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದ ಅವರು, ಯುಪಿ ಸಿಎಂ ಆದಿತ್ಯನಾಥ್ ಹುಬ್ಬಳಿಗೆ ಬಂದು ರಾಜ್ಯ ಸರಕಾರದ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಆದರೆ, ಆದಿತ್ಯನಾಥ್ ಅವರಿಗೆ ಗೊತ್ತಿರಲಿ, ರಾಜ್ಯ ಸರಕಾರ ಟಿಪ್ಪು ಜಯಂತಿ ಮಾತ್ರವಲ್ಲದೇ ಹನುಮ ಜಯಂತಿ, ರಾಮ ಜಯಂತಿ, ಕೃಷ್ಣ ಜಯಂತಿ ಸೇರಿದಂತೆ ಎಲ್ಲ ಮಹನೀಯರ ಜಯಂತಿಗಳನ್ನು ಆಚರಿಸುತ್ತದೆ. ಸಿಎಂ ಆದಿತ್ಯ ಅವರು ನಮ್ಮ ರಾಜ್ಯದ ಬಗ್ಗೆ ಮಾತನಾಡುವ ಮೊದಲು ಅವರ ರಾಜ್ಯಕ್ಕಂಟಿಕೊಂಡಿರುವ ಜಂಗಲ್ ರಾಜ್ಯ ಎಂಬ ಅಡ್ಡ ಹೆಸರನ್ನು ತೊಡೆದು ಹಾಕುವ ಕೆಲಸ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ನೀರಾವರಿ ಕಾಮಗಾರಿಗಳಿಗಾಗಿ ರಾಜ್ಯ ಸರಕಾರ 45 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರೇ, ಹಿಂದಿನ ಬಿಜೆಪಿ ಸರಕಾರ ಬರೀ 18 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಇದನ್ನು ಮರೆಮಾಚಿ ಕಾಂಗ್ರೆಸ್ ಸರಕಾರಕ್ಕಿಂತಲೂ ಬಿಜೆಪಿಯೇ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಫೆಬ್ರವರಿಯಲ್ಲಿ ಅಧಿವೇಶನ ಕರೆಯುತ್ತಿದ್ದು, ಬಿಜೆಪಿ ಅವರು ಅಲ್ಲಿ ಬಂದು ಸತ್ಯ ಹೇಳಿ ಅಂಕಿಅಂಶಗಳನ್ನು ಮುಂದಿಡಲಿ ಎಂದು ಸವಾಲು ಹಾಕಿದರು.
ರಾಜ್ಯದ ರೈತರ ಸಾಲವನ್ನು ನಮ್ಮ ಸರಕಾರ ಮನ್ನಾ ಮಾಡಿದೆ ಎಂದು ಸಿಎಂ ಅವರು ಹೇಳುವಾಗ ವ್ಯಕ್ತಿಯೊಬ್ಬರು ಸಮಾವೇಶದ ಜಾಗದಿಂದಲೇ ರೈತರ ಸಾಲವನ್ನು ಪೂರ್ತಿಯಾಗಿ ಮನ್ನಾ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ತಕ್ಷಣ ಉತ್ತರಿಸಿದ ಸಿಎಂ, ಬಾಕಿ ಸಾಲ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ. ನೀವು ಇದೇ ರೀತಿ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರವನ್ನೂ ಕೇಳಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಯಮಕನಮರಡಿ ಕ್ಷೇತ್ರ ಕಳೆದ ಹತ್ತು ವರ್ಷಗಳಲ್ಲಿ ರಸ್ತೆಗಳು, ನೀರಾವರಿ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿಗಳನ್ನು ಕಂಡಿದೆ. ಸಿಎಂ ಅವರು ಈ ಕ್ಷೇತ್ರಕ್ಕೆ ಇನ್ನಷ್ಟು ಹಣ ನೀಡಿದರೆ ಸರಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಕ್ಷೇತ್ರದಲ್ಲಿ 1 ಸಾವಿರ ಬೋರ್‌ವೆಲ್‌ಗಳನ್ನು ಕೊರೆಸಿದ್ದು, ಇದರಿಂದ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ಭಾಗದ ಜನರಲ್ಲಿ ಬೇರೂರಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಕ್ರೀಡಾ ಪ್ರೋತ್ಸಾಹಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ರಮೇಶ್ ಜಾರಕಿಹೊಳಿ, ಶಾಸಕ ಫಿರೋಝ್ ಶೇಠ್, ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಝಿಯಾವುಲ್ಲಾ ಉಪಸ್ಥಿತರಿದ್ದರು.
ರಾಜಕೀಯದಲ್ಲಿ ಮ್ಯಾಜಿಕ್ ನಡೆಯಲ್ಲ
ರಾಜ್ಯಕ್ಕೆ ನರೇಂದ್ರ ಮೋದಿ, ಅಮಿತ್ ಷಾ ಬಂದು ಹೋದರೆ ನಾವು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ. ಆದರೆ, ರಾಜಕಾರಣದಲ್ಲಿ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ. ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಯುಪಿ ಒಂದು ಜಂಗಲ್ ರಾಜ್ಯ
ಜಂಗಲ್ ರಾಜ್ಯದಲ್ಲಿ ಸಿಎಂ ಆಗಿರುವ ಆದಿತ್ಯ ನಾಥ್ ನಮಗೆ ಜಯಂತಿ ಆಚರಿಸುವ ಬಗ್ಗೆ ತಿಳಿ ಹೇಳಲು ಬರುತ್ತಾರೆ. ಅವರು ತಮ್ಮ ರಾಜ್ಯಕ್ಕೆ ಅಂಟಿರುವ ಜಂಗಲ್ ರಾಜ್ಯ ಎಂಬ ಕಪ್ಪುಮಸಿಯನ್ನು ಮೊದಲು ಅಳಿಸಿಕೊಂಡು ಆಮೇಲೆ ಇನ್ನೊಬ್ಬರಿಗೆ ಬುದ್ಧಿ ಹೇಳುವ ಕೆಲಸ ಮಾಡಲಿ.- ಸಿದ್ದರಾಮಯ್ಯ, ಮುಖ್ಯಮಂತ್ರಿ







