ಕ್ಯಾಲಿಫೋರ್ನಿಯ: 1932ರ ಬಳಿಕದ ಅತಿ ದೊಡ್ಡ ಕಾಡ್ಗಿಚ್ಚು

ಲಾಸ್ ಏಂಜಲಿಸ್ (ಅಮೆರಿಕ), ಡಿ. 23: ಎರಡು ವಾರಗಳ ಕಾಲ ದಾಂಧಲೆಗೈದ ಕ್ಯಾಲಿಫೋರ್ನಿಯ ಕಾಡ್ಗಿಚ್ಚು, ಕನಿಷ್ಠ 1932ರ ಬಳಿಕ ರಾಜ್ಯದಲ್ಲಿ ಸಂಭವಿಸಿದ ಅತಿ ದೊಡ್ಡ ಕಾಡ್ಗಿಚ್ಚಾಗಿದೆ ಎಂದು ಕ್ಯಾಲಿಫೋರ್ನಿಯದ ಅರಣ್ಯ ಮತ್ತು ಬೆಂಕಿ ರಕ್ಷಣೆ ಇಲಾಖೆ ಶುಕ್ರವಾರ ಹೇಳಿದೆ.
ಡಿಸೆಂಬರ್ 4ರಂದು ಆರಂಭಗೊಂಡ ‘ತಾಮಸ್ ಕಾಡ್ಗಿಚ್ಚು’ 2,73,400 ಎಕರೆ ಜಾಗ ಮತ್ತು 1,063 ಕಟ್ಟಡಗಳನ್ನು ಸುಟ್ಟುಹಾಕಿದೆ ಹಾಗೂ 177 ಮಿಲಿಯ ಡಾಲರ್ (ಸುಮಾರು 1,150 ಕೋಟಿ ರೂಪಾಯಿ)ಗೂ ಅಧಿಕ ಪ್ರಮಾಣದ ನಷ್ಟ ಉಂಟುಮಾಡಿದೆ ಎಂದು ಅದು ತಿಳಿಸಿದೆ.
2,800ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದು, ಈಗ 65ಶೇಕಡದಷ್ಟು ಬೆಂಕಿಯನ್ನು ನಂದಿಸಲಾಗಿದೆ.
ಅರಣ್ಯ ಮತ್ತು ಬೆಂಕಿ ರಕ್ಷಣೆ ಇಲಾಖೆಯ ಇಂಜಿನಿಯರ್ ಒಬ್ಬರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ವೆಂಚುರ ಕೌಂಟಿಯಲ್ಲಿ ಡಿಸೆಂಬರ್ 14ರಂದು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
2003ರಲ್ಲಿ ಕಾಣಿಸಿಕೊಂಡ ‘ಸೆಡರ್ ಕಾಡ್ಗಿಚ್ಚು’ಗಿಂತಲೂ ‘ತಾಮಸ್ ಕಾಡ್ಗಿಚ್ಚು’ ಹೆಚ್ಚು ತೀವ್ರವಾಗಿದೆ. 2003ರ ಕಾಡ್ಗಿಚ್ಚು 2,73,246 ಎಕರೆ ಜಮೀನನ್ನು ಸುಟ್ಟು ಹಾಕಿತ್ತು.







