ಪ್ರಧಾನಿಯ ಕೆಲವು ನಿರ್ಧಾರಗಳಿಂದ ದೇಶ ಅಪಾಯದೆಡೆಗೆ: ದೇವೇಗೌಡ ಆತಂಕ

ಬೆಂಗಳೂರು, ಡಿ.21: ಪ್ರಧಾನ ಮಂತ್ರಿ ಸ್ಥಾನದಲ್ಲಿರುವವರು ಯಾವುದೇ ಜನಾಂಗಕ್ಕೂ ಭೇದ-ಭಾವ ಮಾಡಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿಯ ಕೆಲವು ನಿರ್ಧಾರಗಳು ದೇಶವನ್ನು ಅಪಾಯದೆಡೆಗೆ ಕೊಂಡೊಯ್ಯುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ಶನಿವಾರ ನಗರದ ಜಿಕೆವಿಕೆ ಸಭಾಂಗಣದಲ್ಲಿ ಎಚ್.ಎಂ.ಆರ್ ಚಿಕ್ಕಗೊಳಪ್ಪ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರ ಸಾಧನೆ ಕುರಿತು, ಡಾ.ಪ್ರಧಾನ್ ಗುರುದತ್ತ ಮತ್ತು ಡಾ.ಸಿ.ನಾಗಣ್ಣ ರಚಿಸಿರುವ ‘ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ-ದೇಶಗಳೊಡನೆ ಬಿಕ್ಕಟ್ಟು ಸಂಭವಿಸುವಾಗ ಅತ್ಯಂತ ಜಾಣ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶವನ್ನು ಅಪಾಯದತ್ತ ದೂಡುತ್ತಿದ್ದಾರೆ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ರೈತನ ಮಗನಾದ ನಾನು ದೇಶದ ಪ್ರಧಾನಿಯಾಗುತ್ತೇನೆಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಆದರೆ, ಜನತೆಯ ಆಶೀರ್ವಾದದಿಂದ ಪ್ರಧಾನಿಯಾದೆ. ಹೀಗಾಗಿ ನನ್ನ ಆಡಳಿತಾವಧಿಯನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ಅದು ಗಡಿಯ ವಿಷಯವೇ ಇರಲಿ, ನೀರು ಹಂಚಿಕೆಯ ಸಮಸ್ಯೆಯೇ ಆಗಲಿ, ಯಾರಿಗೂ ಸಮಸ್ಯೆಯಾಗದಂತೆ ವೈಜ್ಞಾನಿಕವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದರು.
ಭಾರತ-ಪಾಕಿಸ್ತಾನದ ಗಡಿ ಸಮಸ್ಯೆ ಬಗೆಹರಿಸಲು ಕಾಶ್ಮೀರದ ಗಡಿಯ ವೀಕ್ಷಣೆಗೆ ಹೋಗಲು ನಿರ್ಧರಿಸಿದ್ದೆ. ಆದರೆ, ಪ್ರಾರಂಭದಲ್ಲಿ ಗುಪ್ತಚರ ಇಲಾಖೆ ಬೇಡವೆಂದು ತಡೆದರು. ಆದರೆ, ಪ್ರಧಾನಿಯಾದ ನಾನು ಗಡಿ ಸಮಸ್ಯೆಯನ್ನು ಬಗೆ ಹರಿಸಲೇಬೇಕೆಂಬ ದೃಢಸಂಕಲ್ಪದಿಂದ ಗುಪ್ತಚರ ಇಲಾಖೆಯ ವಿರೋಧವನ್ನು ಲೆಕ್ಕಸದೆ ಅಲ್ಲಿಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದೆ. ಹಾಗೂ ಅಲ್ಲಿನ ಬಡವರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದೆ. ಲಡಾಕ್ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಾಗೂ ಪವರ್ ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿಗೊಳಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಅವರು ತಮ್ಮ ಆಡಳಿತವನ್ನು ಸ್ಮರಿಸಿದರು.
ಲೇಖಕ ಡಾ.ಪ್ರಧಾನ್ ಗುರುದತ್ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರ. ಇನ್ನು ದೆಹಲಿ, ಬೆಂಗಳೂರಿನಲ್ಲಿ ಮೆಟ್ರೊ ರೈಲು ಜಾರಿಯಾಗಿರುವುದಕ್ಕೆ ಇವರ ಕೊಡುಗೆಯೇ ಕಾರಣ. ಈಶಾನ್ಯ ಪ್ರದೇಶಗಳಿಗೆ ಭೇಟಿ ನೀಡಿ, ರಸ್ತೆ, ರೈಲು, ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರು, ಬಡವರು ಕಾರ್ಮಿಕರ ಏಳ್ಗೆಯ ಬಗ್ಗೆ ಎಚ್.ಡಿ.ದೇವೇಗೌಡರಿಗೆ ಆಳವಾದ ಬದ್ಧತೆ ಇದೆ. ಕನ್ನಡ ನಾಡಿನ ಮಣ್ಣಿನ ಮಗನ ಸಮಗ್ರ ಸಾಧನೆಯನ್ನು ದೇಶಕ್ಕೆ ಪರಿಚಯಿಸುವ ಉದ್ದೇಶದಿಂದ ಅವರ ಆಡಳಿತಾವಧಿಯ ‘10ತಿಂಗಳು 10ದಿನದ’ ಸಾಧನೆಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪುಸ್ತಕವನ್ನು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಲಾಗುವುದು ಎಂದು ಅವರು ಹೇಳಿದರು.
ಪುಸ್ತಕ ಕುರಿತು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ಆದರ್ಶ ವ್ಯಕ್ತಿಗಳ ಅಗತ್ಯವಿದ್ದು, ಹೊಸದಾಗಿ ರಾಜಕೀಯ ಸೇರುವವರಿಗೆ ದೇವೇಗೌಡರ ಬದುಕಿನ ಸಾಧನೆ ದಾರಿದೀಪವಾಗಬೇಕಿದೆ. ಹೀಗಾಗಿ ಅವರ ಸಾಧನೆಯ ಕುರಿತು ಹೊರತಂದಿರುವ ‘ಸಾಧನೆಯ ಶಿಖರಾರೋಹಣ’ ಈ ಕೃತಿಯನ್ನು ದೇಶದ ಉದ್ದಗಲಕ್ಕೆ ತಲುಪಬೇಕೆಂದು ತಿಳಿಸಿದರು.
10 ತಿಂಗಳಲ್ಲಿ ಸಾರ್ಥಕದ ಯೋಜನೆ ರೂಪಿಸಿ, ನೂರು ಕಾಲ ನಿಲ್ಲುವ ಸಾಧನೆ ಮಾಡಿದ್ದಾರೆ ಎಂದರೆ ಉತ್ಪೇಕ್ಷೆ ಅಲ್ಲ. ಈ ಪುಸ್ತಕದಲ್ಲಿ ದಾಖಲಿಸಿರುವ ಸಾಧನೆಗಳು ಸಾರ್ವಕಾಲಿಕ ಸಾರ್ಥಕತೆ ಪಡೆಯುತ್ತವೆ ಎಂದರು. ಕಾರ್ಯಕ್ರಮದಲ್ಲಿ ಚನ್ನಮ್ಮ ದೇವೇಗೌಡ, ಲೋಕಾಯುಕ್ತ ನಿವೃತ್ತ ನ್ಯಾ.ವೆಂಕಟಾಚಲಯ್ಯ ಸೇರಿದಂತೆ ಪ್ರಮುಖರಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇವಲ 10 ತಿಂಗಳು ಪ್ರಧಾನಿಯಾಗಿ ಆಡಳಿತ ನಡೆಸಿದರೂ 10 ವರ್ಷ ಆಡಳಿತ ನಡೆಸಿದಷ್ಟು ಕೆಲಸ ಮಾಡಿದ್ದರು. ರೈತರ ಅಭಿವೃದ್ಧಿಗಾಗಿ ಶ್ರಮಿಸಿದರು. ರೈತರ ಕುರಿತು ಅವರಿಗಿರುವಷ್ಟು ಕಳಕಳಿ ಬೇರೆ ಯಾರಲ್ಲಿಯೂ ನಾನು ನೋಡಿಲ್ಲ. ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಅವರು ಕೈಗೊಂಡರು. ಕಾವೇರಿಯ ವಿಚಾರ ಬಂದಾಗಲೆಲ್ಲ ಅವರು ಭಾವುಕರಾಗುತ್ತಾರೆ. ಕಣ್ಣೀರು ಬಂದು ಬಿಡುತ್ತದೆ ಅವರಿಗೆ. ಈ ಕುರಿತು ನನ್ನೊಂದಿಗೆ ಸಾಕಷ್ಟು ಚರ್ಚೆ ಮಾಡಿದ್ದರು.
-ಎಂ.ಎನ್.ವೆಂಕಟಾಚಲಯ್ಯ ನಿವೃತ್ತ ನ್ಯಾಯಮೂರ್ತಿ







