ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಗುರಿ: ಕೆ.ಜೆ.ಜಾರ್ಜ್
ತ್ಯಾಜ್ಯನೀರು ಸಂಸ್ಕರಣಾ ಘಟಕ ಲೋಕಾರ್ಪಣೆ

ಬೆಂಗಳೂರು, ಡಿ.23: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ರಾಜಧಾನಿ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದು, ಬಿಬಿಎಂಪಿ, ಬಿಡಿಎ ಹಾಗೂ ಬೆಂಗಳೂರು ಜಲಮಂಡಳಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶನಿವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಶೀಗೆಹಳ್ಳಿ ಮುಖ್ಯರಸ್ತೆಯ ಟೀಚರ್ಸ್ ಕಾನೂನು ಕಾಲೇಜು ಬಳಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಜೈಕಾ ಸಂಸ್ಥೆಯ ನೆರವಿನೊಂದಿಗೆ 67 ಕೋಟಿ ರೂ.ವೆಚ್ಚದಲ್ಲಿ ಎಲೆ ಮಲ್ಲಪ್ಪ ಚೆಟ್ಟಿ ಕೆರೆ ಸಮೀಪ ಹೊಸದಾಗಿ ನಿರ್ಮಿಸಿರುವ 15 ದಶಲಕ್ಷ ಲೀಟರ್ (ಎಂಎಲ್‌ಡಿ) ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
200 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹಿಂದಿನ ಸರಕಾರವು ಪೂರ್ವ ಸಿದ್ಧತೆಗಳಿಲ್ಲದೆ, ಮೂಲಭೂತ ಸೌಕರ್ಯ ಒದಗಿಸದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಿದ ಪರಿಣಾಮ ಬೆಂಗಳೂರು ನಗರವು 800 ಚ.ಕಿ.ಮೀ.ವಿಸ್ತಾರವಾಗಿದೆ ಎಂದು ಅವರು ಹೇಳಿದರು. ನಮ್ಮ ಸರಕಾರವು ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ವತಿಯಿಂದ ನಾವು ಕೈಗೊಂಡಿರುವ ಯೋಜನೆಗಳನ್ನು ನಮ್ಮ ಅಧಿಕಾರಾವಧಿಯಲ್ಲೆ ಪೂರ್ಣಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ ಎಂದು ಜಾರ್ಜ್ ತಿಳಿಸಿದರು.
ಬೆಂಗಳೂರು ನಗರದಲ್ಲಿ ಪ್ರತಿದಿನ 1800 ದಶಲಕ್ಷ ಲೀಟರ್ ತ್ಯಾಜ್ಯನೀರು ಹೊರ ಬರುತ್ತಿದೆ. ಸಂಪೂರ್ಣ ತ್ಯಾಜ್ಯ ನೀರು ಸಂಸ್ಕರಿಸಲು ಅಗ್ಯತವಿರುವ ಎಸ್‌ಟಿಪಿಗಳ ಪೈಕಿ ಶೇ.80ರಷ್ಟು ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ಇನ್ನುಳಿದ ಶೇ.20ರಷ್ಟು ಎಸ್‌ಟಿಪಿಗಳನ್ನು 2020ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ಆನೇಕಲ್ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಅಲ್ಲಿನ ಕೆರೆಗಳಿಗೆ ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲು 1800 ಕೋಟಿ ರೂ.ಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಾರ್ಜ್ ತಿಳಿಸಿದರು. ಶಾಸಕ ಬಿ.ಎ.ಬಸವರಾಜ ಮಾತನಾಡಿ, ಕೆ.ಆರ್.ಪುರ ಕ್ಷೇತ್ರವು ತೀವ್ರ ಹಿಂದುಳಿದ ಕ್ಷೇತ್ರವಾಗಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡುತ್ತೇನೆ. ಈಗಾಗಲೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ವಿಪಕ್ಷಗಳ ಮುಖಂಡರು ಮಾಡುವ ಆರೋಪಗಳಿಗೆ ಯಾವುದೆ ಹುರುಳಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಕೇಂದ್ರದಲ್ಲಿ ಜವಾಬ್ದಾರಿಯುತ ಸಚಿವರಾಗಿರುವವರು ಇತ್ತೀಚೆಗೆ ನನ್ನ ಕ್ಷೇತ್ರದಲ್ಲಿ 81 ಕೊಲೆಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಇಂತಹ ಕೀಳು ಅಭಿರುಚಿಯ ಆರೋಪಗಳನ್ನು ಮಾಡಿರುವವರಿಗೆ ಉತ್ತರ ನೀಡಲು ನಾಚಿಕೆಯಾಗುತ್ತದೆ ಎಂದು ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಸದಸ್ಯ ಎಸ್.ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ಜಯಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







