ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ರೈತರು

ನವಲಗುಂದ, ಡಿ. 23: ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ, ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂಪ್ಪನವರ ಕಾರನ್ನು ಅಡ್ಡಗಟ್ಟಿ ಘೇರಾವ್ ಹಾಕಿದ ಘಟನೆ ನಡೆದಿದೆ.
ನರಗುಂದದಲ್ಲಿ ‘ಪರಿವರ್ತನಾ ಯಾತ್ರೆ’ ಕಾರ್ಯಕ್ರಮಕ್ಕಾಗಿ ಗದಗದಿಂದ ನವಲಗುಂದ ಮಾರ್ಗವಾಗಿ ನರಗುಂದಕ್ಕೆ ತೆರಳುತ್ತಿದ್ದ ಸಮಯದಲ್ಲಿ ನೀಲಮ್ಮನ ಕೆರೆಯ ಬಳಿ ರೈತ ಮುಖಂಡ ಲೋಕನಾಥ ಹೆಬಸೂರ ಹಾಗೂ ಸುಭಾಸಚಂದ್ರಗೌಡ ಪಾಟೀಲ ನೇತೃತ್ವದಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಬಿ.ಎಸ್.ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು.
ಈ ಭಾಗದ ಜನತೆ 7.5 ಟಿಎಂಸಿ ನೀರು ಹರಿಸುವಂತೆ ಸತತ ಹೋರಾಟ ಮಾಡುತ್ತಿದ್ದರು ಸಹ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಕಳಸಾಬಂಡೂರಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ ನಂತರ, ಕಾರಿನಲ್ಲೆ ಕುಳಿತು ಕಳಸಾ ಬಂಡೂರಿ ರೈತರಿಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಗಾಗಲೇ ಗೋವಾ ಮುಖ್ಯಮಂತ್ರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಆದಷ್ಟು ಬೇಗ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು.
ಜ.15ರೊಳಗೆ ಕಳಸಾಬಂಡೂರಿ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಬಸಣ್ಣ ಬೆಳವಣಕಿ, ಬಸವರಾಜ ಕಾತರಕಿ, ಸಿದ್ದಣ್ಣ ಕೆಟಗೇರಿ, ಅಡಿವೆಪ್ಪ ಮನಮಿ, ಸೇರಿದಂತೆ ನೂರಾರು ಕಳಸಾ ಬಂಡೂರಿ ಹೊರಾಟಗಾರರು ಇದ್ದರು.







