'ಅಂಜನಿಪುತ್ರ' ಚಿತ್ರ ಪ್ರದರ್ಶನಕ್ಕೆ ಕೋರ್ಟ್ ತಡೆ

ಬೆಂಗಳೂರು, ಡಿ.23: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಬಳಕೆ ಮಾಡಲಾಗಿದ್ದು, ಚಿತ್ರ ಪ್ರದರ್ಶನಕ್ಕೆ ಜ.2ರವರೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಬಳಕೆ ಮಾಡಲಾಗಿದೆ ಆದ್ದರಿಂದ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಬೇಕೆಂದು ವಕೀಲ ನಾರಾಯಣಸ್ವಾಮಿ 40ನೆ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅವಹೇಳನಕಾರಿ ಸಂಭಾಷಣೆ ಸಿನಿಮಾದಲ್ಲಿದ್ದು, ಈ ಸಂಭಾಷಣೆಯಿಂದ ವಕೀಲ ಸಮುದಾಯಕ್ಕೆ ಅವಮಾನವಾಗಿದೆ. ಅವಹೇಳನ ಮಾಡುವಂತಿರುವ ದೃಶ್ಯ ಮತ್ತು ಸಂಭಾಷಣೆಯನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಶನಿವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜನವರಿ 2ರ ವರೆಗೆ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.
ಶನಿವಾರ ಸಂಜೆ 7.30ರ ಪ್ರದರ್ಶನದಿಂದ ರಾಜ್ಯದ ಎಲ್ಲಾ ಚಿತ್ರಮಂದರಿಗಳಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಕೋರ್ಟ್ ಆದೇಶಿಸಿದೆ ಎಂದು ತಿಳಿದು ಬಂದಿದೆ.
ವಿವಾದಿತ ಸಂಭಾಷಣೆ ತೆಗೆಯಲು ಸಿದ್ಧ
ರಾಜ್ಯದಾದ್ಯಂತ 345 ಥಿಯೇಟರ್‌ಗಳಲ್ಲಿ 'ಅಂಜನಿಪುತ್ರ' ಚಿತ್ರ ಪ್ರದರ್ಶನ ಕಾಣುತ್ತಿದೆ. ವಿವಾದಿತ ಸಂಭಾಷಣೆ ಬಗ್ಗೆ ನಮಗೆ ಯಾರೂ ನೋಟಿಸ್ ನೀಡಿಲ್ಲ. ಕೋರ್ಟ್ ಆದೇಶದ ಪ್ರತಿಯೂ ಸಿಕ್ಕಿಲ್ಲ. ವಕೀಲ ಸಮುದಾಯಕ್ಕೆ ನೋವಾಗುವ ವಿವಾದಿತ ಸಂಭಾಷಣೆ ತೆಗೆಯಲು ನಾವು ಸಿದ್ಧ. ಆದರೆ ಚಿತ್ರ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಮುಂದೇನು ಮಾಡಬೇಕೆಂಬುದನ್ನು ನಮ್ಮ ವಕೀಲರ ಜತೆ ಚರ್ಚಿಸಿ ನಿರ್ಧರಿಸುತ್ತೇವೆ.
-ಜಾಕ್ ಮಂಜು, ಚಿತ್ರದ ವಿತರಕ







