ಮಟ್ಕಾ, ದಂಧೆಕೋರರ ಗಡಿಪಾರಿಗೆ ಶಿಫಾರಸ್ಸು: ಎಸ್ಪಿ ಡಾ.ಪಾಟೀಲ್

ಉಡುಪಿ, ಡಿ.23: ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿರುವ 11 ಮಂದಿಯನ್ನು ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಈಗಾಗಲೇ ಕುಂದಾಪುರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ಇಂದು ನಡೆದ ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಮಟ್ಕಾ ದಂಧೆಕೋರರ ಗಡಿಪಾರಿಗೆ ಸಂಬಂಧಿಸಿ ಇನ್ನು ಕೆಲವೇ ದಿನಗಳಲ್ಲಿ ಎರಡನೆ ಪಟ್ಟಿಯನ್ನು ಕೂಡ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದರು.
ಹೆಜಮಾಡಿಯಿಂದ ಕುಂದಾಪುರವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆ ಗಳ ಬಗ್ಗೆ ಸರ್ವೆ ಕಾರ್ಯ ನಡೆಸಿದ ಮಣಿಪಾಲ ಎಂಐಟಿಯ ತಜ್ಞರ ತಂಡ ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಸದ್ಯಕ್ಕೆ ಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಈ ವರದಿಯನ್ನು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿ, ಪಾದಾಚಾರಿಗಳ ಸುರಕ್ಷತೆಯ ದೃಷ್ಠಿಯಿಂದ ಅನುಸರಿಸ ಬಹು ದಾದ ಅಗತ್ಯ ಕ್ರಮಗಳನ್ನು ಕೂಡಲೇ ಅನುಷ್ಠಾನ ತರುವಂತೆ ಮನವಿ ಮಾಡ ಲಾಗುವುದು ಎಂದು ಎಸ್ಪಿ ತಿಳಿಸಿದರು.
ಮಣಿಪಾಲದಲ್ಲಿ ಮುಂದುವರಿಯುತ್ತಿರುವ ಕರ್ಕಶ ಹಾರ್ನ್ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಮಣಿಪಾಲ ಪೊಲೀಸ್ ಠಾಣೆಯ ಎದುರು ಬ್ಯಾರಿಕೇಡ್ ಹಾಕಿ ಬಸ್‌ಗಳನ್ನು ತಪಾಸಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಕುಂದಾಪುರದಿಂದ ಹೆಜಮಾಡಿಯವರೆಗೆ ಮೀನು ಲಾರಿಗಳು ನೀರನ್ನು ರಸ್ತೆಯಲ್ಲೇ ಚೆಲ್ಲಿಕೊಂಡು ಹೋಗುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಈಗಾಗಲೇ ಎರಡು ಮೂರು ದೂರು ಗಳು ಬಂದಿದ್ದು, ಇದು ಕೊನೆಯ ದೂರಿನ ಕರೆ ಎಂಬಂತೆ ಮೀನಿನ ಲಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 67ವರ್ಷ ವಯಸ್ಸಿನ ವೃದ್ಧರೊಬ್ಬರು ಕರೆ ಮಾಡಿ, ನಾನು ಮತ್ತೆ ನನ್ನ ಅನಾರೋಗ್ಯ ಪೀಡಿತ ಪತ್ನಿ ಮನೆಯಲ್ಲಿ ವಾಸವಾಗಿದ್ದು, ನಮ್ಮ ಓರ್ವ ಮಗ ನಮ್ಮ ಆಸ್ತಿಯಲ್ಲಿ ಆತನಿಗೆ ಪಾಲು ಕೊಡುವಂತೆ ನಮಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾನೆ. ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿದ್ದಾನೆ. ನಮಗೆ ರಕ್ಷಣೆ ಕೊಡಿ ಎಂದು ದೂರಿದರು.
‘ಸ್ಥಳಕ್ಕೆ ಶಂಕರನಾರಾಯಣ ಠಾಣಾಧಿಕಾರಿಯನ್ನು ಕಳುಹಿಸಿ ಮಗನಿಗೆ ಬುದ್ದಿ ಹೇಳುವ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಸಾಕ್ಷರತೆ ಹೆಚ್ಚಿದ್ದರೂ ಮಾನ ವೀಯತೆ ಮಾತ್ರ ಕುಸಿಯುತ್ತಿದೆ. ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯಲ್ಲಿ ಪೊಲೀಸರ ಪಾತ್ರ ಅತಿ ಕಡಿಮೆ ಇದೆ’ ಎಂದು ಎಸ್ಪಿ ತಿಳಿಸಿದರು. ಕಾಪುವಿನಲ್ಲಿ ಬೆಳಗ್ಗೆ ಏಳು ಗಂಟೆಗೆ ಬಾರ್ ತೆರೆದು, ಹಿಂದಿನ ಬಾಗಿಲಿನಿಂದ ಮದ್ಯ ನೀಡುವ, ಮಣಿಪಾಲದಲ್ಲಿ ಬೀದಿ ದೀಪದ ಸಮಸ್ಯೆ, ಹೊಸವರ್ಷ ಆಚರಣೆಯಿಂದ ಆಗುವ ತೊಂದರೆ, ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿ ನಲ್ಲಿ ಸಂಚಾರ ಸೇರಿದಂತೆ ವಿವಿಧ ದೂರುಗಳು ಸಾರ್ವಜನಿಕರಿಂದ ಬಂದವು.
ಪ್ರವಾಸಿ ಬಸ್ ರಾತ್ರಿ ಸಂಚಾರ ನಿಷೇಧಕ್ಕೆ ಮನವಿ
ಕಾರ್ಕಳದಲ್ಲಿ ನಿನ್ನೆ ರಾತ್ರಿ ಶಾಲಾ ಮಕ್ಕಳ ಪ್ರವಾಸಿ ಬಸ್ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸೂರ್ಯಾಸ್ತದ ಬಳಿಕ ಪ್ರವಾಸಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು. ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರುವ ಶಾಲಾ ಮುಖ್ಯೋಪಾಧ್ಯಾಯರು ಬಸ್‌ಗಳಲ್ಲಿ ಇಬ್ಬರು ಚಾಲಕರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಕ್ರಿಸ್ಮಸ್ ಹಾಗೂ ಹೊಸವರ್ಷ ಆಚರಣೆಯ ಹಿನ್ನೆಲೆಯಲ್ಲಿ ಉಡುಪಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಗಸ್ತು ಸಂಚಾರವನ್ನು ತೀವ್ರ ಗೊಳಿಸಲಾಗಿದೆ. ಹೆಚ್ಚಿನ ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ಮಾಡ ಲಾಗುವುದು. ಹಾಗಾಗಿ ವಾಹನ ಚಾಲಕರು ಹಾಗೂ ಪ್ರಯಾಣಿಕರು ತಮ್ಮಲ್ಲಿ ಅಗತ್ಯದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.







