ಮಹಾದಾಯಿ ವಿವಾದ: ರೈತ ಹೋರಾಟಗಾರರಿಂದ ಬಿಜೆಪಿ ಕಚೇರಿ ಮುಂದೆ ಧರಣಿ
ಬೆಂಗಳೂರು, ಡಿ.23: ಮಹಾದಾಯಿ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಬೇಕೆಂದು ಒತ್ತಾಯಿಸಿ ಮಹಾದಾಯಿ ರೈತ ಹೋರಾಟಗಾರರು ನಗರದ ಬಿಜೆಪಿ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ.
ಗದಗ್‌ನ ನರಗುಂದದಿಂದ ರೈಲಿನಲ್ಲಿ ನಗರಕ್ಕೆ ಬಂದಿರುವ ನೂರಾರು ರೈತ ಹೋರಾಟಗಾರರು, ನಗರದ ಬಿಜೆಪಿ ಕಚೇರಿ ಮುಂಭಾಗ ಧರಣಿ ಪ್ರಾರಂಭಿಸಿದ್ದಾರೆ. ಕೇಂದ್ರದಲ್ಲಿ ಹಾಗೂ ಗೋವಾದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಹೀಗಾಗಿ ಬಿ.ಎಸ್.ಯಡಿಯೂರಪ್ಪ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಸೂಕ್ತ ಭರವಸೆ ನೀಡುವವರೆಗೆ ಬಿಜೆಪಿ ಕಚೇರಿಯಿಂದ ಹೊರ ಹೋಗುವುದಿಲ್ಲವೆಂದು ರೈತ ಹೋರಾಟಗಾರರು ಪಟ್ಟು ಹಿಡಿದರು.
ಈ ವೇಳೆ ಮಹಾದಾಯಿ ಹೋರಾಟದ ಉಪಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ಮಹಾದಾಯಿ ವಿವಾದವನ್ನು ಕಾನೂನಾತ್ಮಕವಾಗಿ ಬಗೆಹರಿಸಲು ರಾಜ್ಯ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಈ ಸಂಬಂಧ ರೈತರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕೆಂದು ಒತ್ತಾಯಿಸಲು ಧರಣಿಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಮಹಾದಾಯಿ ಹೋರಾಟ ಪಕ್ಷಾತೀತವಾಗಿದೆ. ನಮ್ಮ ಹೋರಾಟಕ್ಕೆ ಸಹಕರಿಸುವ ಯಾವುದೇ ಪಕ್ಷದ ನಾಯಕರನ್ನು ಸ್ವಾಗತಿಸುತ್ತೇವೆ. ಆದರೆ, ರೈತರ ಬದುಕನ್ನು ಮುಂದಿಟ್ಟುಕೊಂಡು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಲ್ಲಿಗೆ ಬಂದು ನಿರ್ದಿಷ್ಟವಾದ ಭರವಸೆ ನೀಡುವವರೆಗೆ ಇಲ್ಲಿಂದ ಹೋಗುವುದಿಲ್ಲವೆಂದು ಪಟ್ಟು ಹಿಡಿದರು. ಅದಕ್ಕೆ ಅಲ್ಲಿ ನೆರೆದಿದ್ದ ಎಲ್ಲ ಹೋರಾಟಗಾರರು ಘೋಷಣೆ ಕೂಗುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.







