ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಅಗತ್ಯ: ಪ್ರೊ.ಚಂಪಾ
‘ಫ್ಯಾಶಿಸಂ ಶಕ್ತಿಗಳನ್ನು ಎದುರಿಸಲು ನಾಗರಿಕ ಸಮಾಜದ ಪಾತ್ರ’ ವಿಚಾರ ಸಂಕಿರಣ

ಬೆಂಗಳೂರು, ಡಿ.23: ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಬಲಿಷ್ಠವಾಗುತ್ತಿವೆ. ಇದನ್ನು ನಿಯಂತ್ರಿಸಬೇಕಾದರೆ, ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಹಾಗೂ ಫ್ಯಾಶಿಸ್ಟ್ ಧೋರಣೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಿಸಿದ್ದಾರೆ. ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಮಾತೆ-ಇ-ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಫ್ಯಾಶಿಸಂ ಶಕ್ತಿಗಳನ್ನು ಎದುರಿಸಲು ನಾಗರಿಕ ಸಮಾಜದ ಪಾತ್ರ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿಂದು ನಡೆಯುತ್ತಿರುವ ಎಲ್ಲ ಅನಾಹುತಗಳಿಗೆ ನಾವೇ ಕಾರಣರಾಗಿದ್ದು, ಅದನ್ನು ಎದುರಿಸಲು ಸಾಧ್ಯವಿರುವ ಪರ್ಯಾಯ ಮಾರ್ಗಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.
ಫ್ಯಾಶಿಸಂ ಎಂಬುದು ಶೂನ್ಯ ವೇಳೆಯಲ್ಲಿ ಹುಟ್ಟಿಕೊಂಡಿಲ್ಲ. ಬದಲಿಗೆ, ನಮ್ಮ ಬದುಕಿನಲ್ಲಿ ಮೌಲ್ಯಗಳು ಇಲ್ಲದಿದ್ದಾಗ ಸೃಷ್ಟಿಯಾಗುವ ಅಪಮೌಲ್ಯಗಳ ಆಧಾರದ ಮೇಲೆ ಜನ್ಮತಾಳಿದೆ. ಅದನ್ನು ಸುಲಭವಾಗಿ ಪರಿಹಾರ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ವಾಸ್ತವವಾಗಿ ಫ್ಯಾಶಿಸಂ ಬಹಳಷ್ಟು ಕ್ರೂರವಾಗಿದೆ. ಅದನ್ನು ನಾವು ಅರ್ಥ ಮಾಡಿಕೊಂಡು ಬದುಕುವುದು ಕಲಿಯಬೇಕು. ಆಗ ಮಾತ್ರ ಅದನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.
ಫ್ಯಾಶಿಸಂ ಮತ್ತು ಮಾನವೀಯವಾದ ಪರಸ್ಪರ ವಿರೋಧಿಗಳಾಗಿದ್ದು, ಇವೆರಡು ಎದುರಾದಾಗ ನಮ್ಮ ಆಯ್ಕೆ ಯಾವುದು ಎಂಬುದು ಸ್ವಷ್ಟವಿರಬೇಕು. ಕೂಡಿ ಬಾಳೋಣ, ದುಡಿದು ಬದುಕೋಣ, ಹಂಚಿ ತಿನ್ನೋಣ ಎಂಬ ತತ್ವ ಅಳವಡಿಸಿಕೊಳ್ಳದಿದ್ದರೆ ನಾವು ಬೆಳೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹಾಗೂ ಅಮಾನವೀಯತೆಯನ್ನು ದೂರ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಕೃತಿ, ಲೇಖನ ಹಾಗೂ ಇನ್ನಿತರೆ ಬರವಣಿಗೆ ಮೂಲಕ ಬದಲಾವಣೆ ಆಗುವುದಿಲ್ಲ. ಕ್ರಿಯೆಗೆ ಇಳಿಯಬೇಕು. ಆಗ ಮಾತು ಮತ್ತು ಕ್ರಿಯೆಗೆ ಬೆಲೆ ಬರುತ್ತದೆ ಎಂದ ಅವರು, ಕ್ರಿಯೆ ನಂತರ ಅದು ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಬೀರಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದರು. ಇಂದಿನ ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು ಅದರ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದ ಅವರು, ವಿಶ್ವದ ಹಲವು ಸ್ವಾತಂತ್ರ ಪಡೆದ ರಾಷ್ಟ್ರಗಳು ಸರ್ವಾಧಿಕಾರಿ ರಾಷ್ಟ್ರಗಳಾಗಿವೆ. ಅದೇ ಹಾದಿಯಲ್ಲಿ ನಮ್ಮ ದೇಶ ಸಾಗುತ್ತಿದೆ. ಆದರೆ, ನಮ್ಮ ದೇಶದ ಜನರು ತಕ್ಕ ಉತ್ತರ ನೀಡಲಿದ್ದಾರೆ. ಇತ್ತೀಚಿಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಿಜೆಪಿ ಬೀಗುತ್ತಿದೆ. ಆದರೆ, ಅಲ್ಲಿನ ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ ಹಿಂದುಳಿದ ಸಮುದಾಯದ ಅಲ್ಪೇಶ್ ಠಾಕೂರ್ ಗೆಲುವು ಪರ್ಯಾಯ ಮಾರ್ಗಗಳನ್ನು ತೆರೆದಿಟ್ಟಿದೆ ಎಂದು ಹೇಳಿದರು.
ಮುಂದಿನ ವರ್ಷದಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ನಮ್ಮ ಸಮಸ್ಯೆಗಳಿಗೆ ಕಿವಿಗೊಡುವ ಅಥವಾ ಸಮಾಜದ ಕುರಿತು ಕಳಕಳಿಯುಳ್ಳವರಿಗೆ ಬೆಂಬಲ ನೀಡುವ ಮೂಲಕ ಫ್ಯಾಶಿಸ್ಟ್‌ರನ್ನು ಮೂಲೆಗುಂಪು ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ವಿಚಾರವಾದಿ ಜಿ.ಕೆ.ಗೋವಿಂದರಾವ್, ದೇವರಾಜ್ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಎನ್.ವಿ.ನರಸಿಂಹಯ್ಯ, ಸಂಘಟನೆಯ ಕಾರ್ಯದರ್ಶಿ ಡಾ.ಮುಹಮ್ಮದ್ ತಹಾ ಮತೀನ್, ಅಧ್ಯಕ್ಷ ಡಾ.ಬೆಳ್ಗಾಮಿ ಮುಹಮ್ಮದ್ ಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







