ಭ್ರಷ್ಟಾಚಾರ,ರೈತರ ಸಂಕಷ್ಟಗಳ ಕುರಿತು ಮೋದಿ ಸರಕಾರ ಗಂಭೀರವಾಗಿಲ್ಲ: ಅಣ್ಣಾ ಹಝಾರೆ

ಹೊಸದಿಲ್ಲಿ,ಡಿ.23: ಭ್ರಷ್ಟಾಚಾರದ ಹಾವಳಿ ಮತ್ತು ರೈತರ ಬವಣೆಯಂತಹ ವಿಷಯಗಳನ್ನು ನಿಭಾಯಿಸುವಲ್ಲಿ ಕೇಂದ್ರವು ಗಂಭೀರವಾಗಿಲ್ಲ ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಅವರು ಆರೋಪಿಸಿದ್ದಾರೆ.
ಶನಿವಾರ ರಾಜಸ್ಥಾನದ ನಗೌರಾ ಜಿಲ್ಲೆಯ ತಾಪರವೇರಾ ಗ್ರಾಮವನ್ನು ಮದ್ಯ ಮುಕ್ತ ಎಂದು ಘೋಷಿಸಲು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳು ತ್ತಿದ್ದಾರೆ. ಭ್ರಷ್ಟಾಚಾರವು ಸಮಾಜವನ್ನು ನಾಶಗೊಳಿಸುತ್ತಿದೆ. ಈ ವಿಷಯಗಳನ್ನು ಪ್ರಮುಖವಾಗಿ ಬಿಂಬಿಸಿ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಲವಾರು ಪತ್ರಗಳನ್ನು ಬರೆದಿದ್ದೇನೆ. ಯಾವುದೇ ವಿಳಂಬವಿಲ್ಲದೆ ಈ ಸಮಸ್ಯೆಗಳನ್ನು ಬಗೆಹರಿಸಲು ಹಸ್ತಕ್ಷೇಪ ಮಾಡುವಂತೆ ಅವರನ್ನು ಆಗ್ರಹಿಸಿದ್ದೇನೆ. ಆದರೆ ಈವರೆಗೂ ಒಂದೇ ಒಂದು ಪತ್ರಕ್ಕೂ ಉತ್ತರಿಸುವ ಸೌಜನ್ಯವನ್ನು ಪ್ರಧಾನಿ ತೋರಿಸಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ, ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ಅವರು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಹಝಾರೆ, ಕಳೆದ 22 ವರ್ಷಗಳಲ್ಲಿ 12 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಎಷ್ಟು ಕೈಗಾರಿಕೋದ್ಯಮಿಗಳು ಹತಾಶೆಯಿಂದ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ ಎನ್ನುವುದನ್ನು ತಾನು ತಿಳಿಯಲು ಬಯಸುತ್ತಿದ್ದೇನೆ. ಸರಕಾರದ ಆದ್ಯತೆಗಳಲ್ಲಿ ಅನ್ನದಾತನಿಗೆ ಯಾವುದೇ ಸ್ಥಾನವಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದರು.







