ಪುತ್ತೂರು: ಶಾಲೆಯಲ್ಲಿ ಕೋಮುಪ್ರಚೋದಕ ಕೃತ್ಯ ಆರೋಪ; ಉಪವಿಭಾಗಾಧಿಕಾರಿಗೆ ಮನವಿ

ಪುತ್ತೂರು, ಡಿ. 23: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಖಾಸಗಿ ಪ್ರೌಢಶಾಲೆಯೊಂದರಲ್ಲಿ ಕೋಮು ಪ್ರಚೋದನಾಕಾರಿ ಬರವಣಿಗೆಯುಳ್ಳ ಗೋ ಹತ್ಯಾ ನಿಷೇಧದ ಕುರಿತಾದ ಮನವಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಹಿ ಪಡೆಯುವ ಸಲುವಾಗಿ ಹಂಚುವ ಮೂಲಕ ಕೋಮು ಪ್ರಚೋದನೆ ನೀಡುವ ಕೃತ್ಯ ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಂ ಒಕ್ಕೂಟವು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪೆರ್ನಾಜೆಯ ಪ್ರೌಢಶಾಲೆಯೊಂದರಲ್ಲಿ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಈದೀಗ ಅನೇಕ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ಗೋ ಹತ್ಯಾ ನಿಷೇಧದ ಅರ್ಜಿಯೊಂದನ್ನು ಸದ್ರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಮನೆ ಮನೆಗೆ ಹಂಚಿ ವಿದ್ಯಾರ್ಥಿಗಳ, ಪೋಷಕರ ಹೆಸರು ಮತ್ತು ಸಹಿ ಅಭಿಯಾನದ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಅನ್ಯೋನ್ಯತೆಯಿರುವ ಅಮ್ಚಿನಡ್ಕ, ಕನಕಮಜಲು, ಪೆರ್ನಾಜೆ ಪ್ರದೇಶದಲ್ಲಿ ಕೋಮು ಸೂಕ್ಷ್ಮ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಪರಸ್ಪರ ಧ್ವೇಷ ಹರಡುವ ಪ್ರಯತ್ನ ಖೇದಕರ ಮತ್ತು ಖಂಡನೀಯ ವಿಚಾರವಾಗಿದೆ. ಆದುದರಿಂದ ಸದ್ರಿ ಶಾಲೆಯಲ್ಲಿ ವಿತರಿಸಿದ ಗೋ ಹತ್ಯಾ ನಿಷೇಧದ ಕುರಿತಾದ ಮನವಿಯನ್ನು ಕೂಡಲೇ ಪರಿಶೀಲಿಸಿ ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸದಂತೆ ತಡೆ ಹಿಡಿಯಬೇಕು ಮತ್ತು ಈ ಮನವಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಿದ ಸಂಬಂಧಪಟ್ಟ ಶಿಕ್ಷಕರ ಹಾಗೂ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಜಾಬಿರ್ ಅರಿಯಡ್ಕ, ಪ್ರಮುಖರಾದ ಇಸಾಕ್ ಜಾರತ್ತಾರು, ಇರ್ಶಾದ್ ಜಾರತ್ತಾರು ತಿಳಿಸಿದ್ದಾರೆ.







