ಅತ್ಯಾಚಾರ, ಕೊಲೆ ಪ್ರಕರಣ: ಮಂಗಳೂರು ವಿವಿಯಲ್ಲಿ ಪ್ರತಿಭಟನೆ

ಕೊಣಾಜೆ, ಡಿ. 23: ವಿಜಾಪುರದ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಎಲ್ಲಾ ಸಮಾನ ಮನಸ್ಕರು ಸೇರಿಕೊಂಡು ಕರ್ನಾಟಕ ಬಂದ್ ನಡೆಸುವ ಅನಿವಾರ್ಯತೆ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಸಂತೋಷ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ ಮುಖದ್ವಾರದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವೀಯತೆ ದೃಷ್ಟಿಯಿರದೆ ಸಾಮಾಜಿಕ ಕಳಕಳಿಯೇ ಇಲ್ಲದ ಸಂಘಪರಿವಾರದ ಮುಖಂಡರು ದಲಿತರ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡಿ ಮರುಳು ಮಾಡುತ್ತಿದ್ದೀರಿ. ದಲಿತರನ್ನು ಕೇವಲ ಮತಕ್ಕಾಗಿ ಬಳಸುವ ಪಕ್ಷಗಳು ಅಮಾಯಕ ವಿದ್ಯಾರ್ಥಿನಿಯ ಹತ್ಯೆ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದರ ಹಿಂದಿನ ಸಂಚು ಏನೆಂಬುದು ತಿಳಿದಿಲ್ಲ. ಘಟನೆ ಖಂಡಿಸಿ ಇಂದು ವಿಜಾಪುರ ಬಂದ್ ಆಗಿದ್ದರೆ, ಮುಂದೆಯೂ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಇಡೀ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾದೀತು ಎಂದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಇಸ್ಮತ್ ಪಜೀರು, ಸಂಶೋಧನಾ ವಿದ್ಯಾರ್ಥಿ ಹರೀಶ್.ಎಂ, ಮಂಗಳೂರು ವಿ.ವಿ ಪ್ರಾಧ್ಯಾಪಕರಾದ ಪ್ರೊ. ವಿಶ್ವನಾಥ್, ಡಾ.ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.







