ಉ.ಪ್ರದೇಶ: ಅಂತರ್‌ಧರ್ಮೀಯ ವಿವಾಹಕ್ಕೆ ಅಡ್ಡಿಯತ್ನ
ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಲಕ್ನೊ, ಡಿ.23: ರಾಜ್‌ನಗರ ಪ್ರದೇಶದಲ್ಲಿ ಹಿಂದು ಮಹಿಳೆ ಮತ್ತು ಮುಸ್ಲಿಂ ವ್ಯಕ್ತಿಯ ಮದುವೆಗೆ ಅಡ್ಡಪಡಿಸಿದ್ದಾರೆ ಎನ್ನಲಾದ 100ಕ್ಕೂ ಹೆಚ್ಚು ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ತನ್ನ ಮನೆಯ ಎದುರು ಬಿಜೆಪಿಯ ನಗರ ಘಟಕಾಧ್ಯಕ್ಷ ಅಜಯ್ ಶರ್ಮ ನೇತೃತ್ವದಲ್ಲಿ ತಂಡವೊಂದು ಜಮಾಯಿಸಿ ಪ್ರತಿಭಟನೆ ನಡೆಸಿದಾಗ ಸಂಚಾರ ವ್ಯವಸ್ಥೆಗೆ ತೊಡಕಾಗಿದೆ ಎಂದು ಮಹಿಳೆಯ ತಂದೆ ತಿಳಿಸಿದ್ದಾರೆ.
ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ 113 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ‘ಲವ್‌ಜಿಹಾದ್’ ಪ್ರಕರಣವಾದ ಕಾರಣ ಪ್ರತಿಭಟನೆ ನಡೆಸಿದ್ದೇವೆ ಎಂದು ಅಜಯ್ ಶರ್ಮ ಪ್ರತಿಪಾದಿಸಿದ್ದಾರೆ. ಆದರೆ ಮಹಿಳೆ ಮತ್ತು ಆ ವ್ಯಕ್ತಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದು ಸ್ನೇಹಿತರಾಗಿದ್ದರು. ಘಟನೆಯ ಬಳಿಕ ಇವರ ವಿವಾಹವನ್ನು ನ್ಯಾಯಾಲಯದಲ್ಲಿ ನೆರವೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





