ಏರ್‌ಪೋರ್ಟ್‌ಗೆ ಕೇಂದ್ರದಿಂದ ಹಸಿರು ನಿಶಾನೆ: ಪ್ರೀತಮ್ ಜೆ.ಗೌಡ
ಹಾಸನ, ಡಿ.23: ಕೇಂದ್ರ ಸರಕಾರದಿಂದ ಜಿಲ್ಲೆಗೆ ನೂತನ ಕೊಡುಗೆ ನೀಡಿದ್ದು, ಏರ್‌ಪೋರ್ಟ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 1972ರಲ್ಲಿ ಏರ್‌ಪೋರ್ಟ್‌ಗಾಗಿ ಬೂವನಹಳ್ಳಿ ಬಳಿ 134 ಎಕರೆ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ನಂತರದಲ್ಲಿ 536 ಎಕರೆ ಭೂಮಿ ಅವಶ್ಯಕತೆಗಾಗಿ ರೈತರಿಂದ ಭೂಮಿ ಪಡೆಯುವ ಪ್ರಕ್ರಿಯೆ ಕಾರ್ಯ ನಡೆಸಲಾಯಿತು. ಮಾಜಿ ಪ್ರಧಾನಿ ದೇವೇಗೌಡರು 2007ರಲ್ಲಿ ಏರ್‌ಪೋರ್ಟ್ ಸುತ್ತ ಕಾಂಪೌಂಡ್ ನಿರ್ಮಿಸಿದರು. ತದನಂತರ ಅಭಿವೃದ್ಧಿ ಕೆಲಸವಾಗದೆ ನನೆಗುದಿಗೆ ಬಿದ್ದಿತ್ತು. ಬಹಳ ವರ್ಷದ ಬೇಡಿಕೆಯನ್ನು ಜಿಲ್ಲಾ ಬಿಜೆಪಿ ಪಕ್ಷದಿಂದ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಯಿತು.
ಶೋಭಾ ಕರದ್ಲಾಂಜೆ ಮತ್ತಿತರರು ಕೂಡ ಶ್ರಮಿಸಿದ್ದಾರೆ. ಎಲ್ಲರ ಮನವಿಗೆ ಸ್ಪಂದಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿ ಸರಕಾರ ಏರ್‌ಪೋರ್ಟ್‌ಗೆ ಅವಕಾಶ ಕೊಟ್ಟಿದೆ ಎಂದು ಈ ವೇಳೆ ಅಭಿನಂದನೆ ವ್ಯಕ್ತಪಡಿಸಿದರು. ಏರ್‌ಪೋರ್ಟ್ ಇಲ್ಲಿ ನಿರ್ಮಾಣವಾದರೇ ಇದರಿಂದ ರೈತರಿಗೆ ಮತ್ತು ಯುವಕರಿಗೆ ಅನುಕೂಲವಾಗಲಿದೆ. ಶೂನ್ಯದಿಂದ ಪ್ರಾರಂಭಿಸುವ ಪ್ರಾಜೇಕ್ಟ್ ಇದು ಆಗಿದೆ. ವಿದೇಶಿ ಬಂಡವಾಳವನ್ನು ತರಲು ಅನುಕೂಲವಾಗಲಿದೆ. ರೈತರು ಬೆಳೆಯುವ ಬೆಳೆಗಳನ್ನು ವಿದೇಶಗಳಿಗೂ ಮಾರಾಟ ಮಾಡುವ ಅವಕಾಶ ಸಿಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಶೋಬಾನ್ ಬಾಬು, ಮಾಧ್ಯಮ ವಕ್ತಾರ ವೇಣುಗೋಪಾಲ್, ಮುಖಂಡ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.







