ಅಕ್ರಮ ಫುಟ್‌ಪಾತ್ ವ್ಯಾಪಾರಿಗಳ ತೆರವು ಕಾರ್ಯಾಚರಣೆ

ಕನಕಪುರ, ಡಿ.23: ಸುಗಮ ಸಂಚಾರ ಮತ್ತು ಪಾದಚಾರಿಗಳಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದ್ದ ಅಕ್ರಮ ಫುಟ್‌ಪಾತ್ ವ್ಯಾಪಾರಿಗಳನ್ನು ಹಾರೋಹಳ್ಳಿ ಗ್ರಾಪಂ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಸಬ್‌ಇನ್‌ಸ್ಪೆಕ್ಟರ್ ಸಿ.ಕೃಷ್ಣಕುಮಾರ್ ಮಾತನಾಡಿ, ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಅಕ್ರಮ ಫುಟ್‌ಪಾತ್ ವ್ಯಾಪಾರದಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಫುಟ್‌ಪಾತ್ ವ್ಯಾಪಾರಿಗಳು ಮತ್ತೆ ರಸ್ತೆಯ ಬಳಿಬಂದು ವ್ಯಾಪಾರಕ್ಕೆ ಮುಂದಾಗುವ ಮೂಲಕ ಕಿರಿಕಿರಿ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ಎರಡೂ ಬದಿಯ ಅಂಗಡಿ ಮಾಲಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ರಸ್ತೆಯ ಮುಂದಕ್ಕೆ ನಿರ್ಮಿಸಿಕೊಂಡಿರುವ ಮೇಲ್ಛಾವಣಿ (ಶೆಲ್ಟರ್)ಗಳನ್ನು ಇನ್ನೆರಡು ದಿನಗಳ ಒಳಗೆ ತೆರವುಗೊಳಿಸಬೇಕು. ಇದನ್ನು ನಿರ್ಲಕ್ಷ ಮಾಡಿದರೆ ಪೊಲೀಸ್ ಇಲಾಖೆಯೇ ಮುಂದೆ ನಿಂತು ಜೆಸಿಬಿ ಯಂತ್ರಗಳಿಂದ ಧ್ವಂಸಗೊಳಸಲಾಗುವುದು. ಆದ್ದರಿಂದ ಮಾಲಕರು ಕೂಡಲೇ ಶೆಲ್ಟರ್‌ಗಳನ್ನು ತೆರವುಗೊಳಿಸಿಕೊಳ್ಳುವುದು ಮತ್ತು ರಸ್ತೆಯ ಮುಂದಕ್ಕೆ ಬಾರದಂತೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ ಎಂದರು.
ಹಾರೋಹಳ್ಳಿ ಬಸ್ ನಿಲ್ದಾಣದಿಂದ ಆನೇಕಲ್ ರಸ್ತೆಯಲ್ಲಿ ಪಾದಚಾರಿಗಳ ಮಾರ್ಗ ಸೇರಿದಂತೆ ಎರಡೂ ಬದಿಯಲ್ಲಿ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಈ ಅಕ್ರಮ ಫುಟ್‌ಪಾತ್ ತೆರವಿನಿಂದ ಸಾರ್ವಜನಿಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೇಕಲ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟಿಗಾಗಿ ರಸ್ತೆಯನ್ನು ಆಕ್ರಮಿಸಿಕೊಂಡಿದ್ದರಿಂದ ವಾಹನಗಳ ಸಂಚಾರ ಮತ್ತು ಪಾದಚಾರಿಗಳು ಓಡಾಡಲು ತೀವ್ರ ತೊಂದರೆ ಉಂಟಾಗುತ್ತದೆಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳಿಗೆ ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಪೊಲೀಸ್ ಇಲಾಖೆಯ ವತಿಯಿಂದ ಅವರಿಗೆ ಹಲವಾರು ಬಾರಿ ಎಚ್ಚರಿಕೆಯನ್ನೂ ನೀಡಿ ಸುಗಮ ಸಂಚಾರಕ್ಕಾಗಿ ರಸ್ತೆಯಲ್ಲಿ ನಿಲ್ಲುವ ವಾಹನಗಳ ನಿಲುಗಡೆಗೂ ಸಹ ಸೂಚನೆಗಳನ್ನು ನೀಡಲಾಗಿತ್ತು. ಆದರೂ ಫುಟ್‌ಪಾತ್ ವ್ಯಾಪಾರಿಗಳ ಕಿರುಕುಳ ಮತ್ತು ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಪೊಲೀಸ್ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿಯ ವ್ಯಾಪಾರಿಗಳಾದ ತರಕಾರಿ, ಹೂ-ಹಣ್ಣು ಹಾಗೂ ಅಂಗಡಿ ಮುಂಗಟ್ಟುಗಳ ಮಾಲಕರು ಅಂಗಡಿಯ ಮುಂದಿನ ರಸ್ತೆಯನ್ನು ಆಕ್ರಮಿಸಿಕೊಂಡಿದ್ದರು. ಇದರಿಂದ ವಾಹನಗಳು ಸಂಚರಿಸಲು ಸಮಸ್ಯೆಯಾಗಿ ವಾಹನ ಸವಾರರು ಸ್ವಲ್ಪಅಜಾಗರೂಕತೆಯಿಂದ ಚಾಲನೆ ಮಾಡಿದರೆ ಅಪಘಾತವಾಗುವ ಸಂಭವಗಳೂ ಇದ್ದವು. ಇದನ್ನರಿತು ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂದರ್ಭ ಸಬ್‌ಇನ್‌ಸ್ಪೆಕ್ಟರ್ ಸಿ.ಕೃಷ್ಣಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಅಧ್ಯಕ್ಷ ಗುರುಪ್ರಸಾದ್, ಸದಸ್ಯ, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







