ಯುನೆಸ್ಕೋ ತೊರೆಯುವಂತೆ ಇಸ್ರೇಲ್ ರಾಯಭಾರಿಗೆ ನೇತಾನ್ಯಹು ನಿರ್ದೇಶ

ಹೊಸದಿಲ್ಲಿ, ಡಿ.23: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ)ಯಿಂದ ಹೊರಬರುವಂತೆ ಇಸ್ರೇಲ್‌ನ ಯುನೆಸ್ಕೋ ರಾಯಭಾರಿ ಕಾರ್ಮೆಲ್ ಶಮಾ ಹಾಕೊಹೆನ್ ಅವರಿಗೆ ಪ್ರಧಾನಿ ಬೆಂಜಾಮಿನ್ ನೇತಾನ್ಯಹು ಅವರು ನಿರ್ದೇಶ ನೀಡಿದ್ದಾರೆ ಎಂದು ದಿ ಜೆರುಸಲೇಮ್ ಪೋಸ್ಟ್ ವರದಿ ಮಾಡಿದೆ.
ಯುನೆಸ್ಕೋದಿಂದ ಹೊರಬೀಳುವುದಾಗಿ ಇಸ್ರೇಲ್ ಹಿಂದೆಯೂ ಬೆದರಿಕೆಗಳನ್ನೊಡ್ಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಯುನೆಸ್ಕೋದಿಂದ ನಿರ್ಗಮಿಸಿರುವ ಅಮೆರಿಕದೊಂದಿಗೆ ಕೈ ಜೋಡಿಸಿರುವ ಇಸ್ರೇಲ್ ಡಿ.31ರಿಂದ ತಾನು ಯುನೆಸ್ಕೋದ ಸದಸ್ಯನಾಗಿರುವುದಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಿದೆ.
ಅರ್ಥಹೀನ ವೇದಿಕೆಯಾಗಿರುವ ಯುನೆಸ್ಕೋದಲ್ಲಿ ವಿವೇಕಯುತ ಮತ್ತು ಸುವ್ಯವಸ್ಥಿತ ಆಡಳಿತವಿರುವ ರಾಷ್ಟ್ರಗಳಿಗೆ ಯಾವುದೇ ಕೆಲಸವಿಲ್ಲ ಎಂದು ಹೇಳಿದ ಹಾಕೊಹೆನ್, ಇಸ್ರೇಲ್‌ನಿಂದಾಗಿ ಅಮೆರಿಕವು ಯುನೆಸ್ಕೋದಿಂದ ಹೊರಗೆ ಬಂದಿದೆ ಮತ್ತು ಅದರೊಂದಿಗೆ ಕೈ ಜೋಡಿಸುವುದು ನಮ್ಮ ನೈತಿಕ ಕರ್ತವ್ಯವಾಗಿದೆ ಎಂದರು.
ಅರಬ್ ರಾಷ್ಟ್ರಗಳು ಮತ್ತು ವಿಶ್ವದ ‘ಹತಾಶ ಮತ್ತು ಅಪ್ರಬುದ್ಧ ’ರಾಷ್ಟ್ರಗಳ ನೇತೃತ್ವದಲ್ಲಿ ಯುನೆಸ್ಕೋ ಇಸ್ರೇಲ್ ಮತ್ತು ಯಹೂದಿಗಳ ವಿರುದ್ಧ ಆಷಾಢಭೂತಿತನ, ಪ್ರಚೋದನೆ ಮತ್ತು ಸುಳ್ಳುಗಳ ಎಲ್ಲ ದಾಖಲೆಗಳನ್ನು ಮುರಿದಿದೆ ಎಂದೂ ಹಾಕೊಹೆನ್ ಹೇಳಿದರು.







