‘ಮೈಸೂರು ಮಾಗಿ ಉತ್ಸವ’ಕ್ಕೆ ಚಾಲನೆ

ಮೈಸೂರು, ಡಿ.23: ದಸರಾ ಉತ್ಸವದ ರಿೀತಿಯಲ್ಲಿ ಆಯೋಜನೆ ಮಾಡಿರುವ ಮೈಸೂರು ಮಾಗಿ ಉತ್ಸವಕ್ಕೆ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಅರಮನೆ ಆವರಣದಲ್ಲಿ ಶನಿವಾರ ಏರ್ಪಡಿಸಿರುವ ಫಲಪುಷ್ಪಪ್ರದರ್ಶನ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿನೂತನವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಫಲಪುಷ್ಪಪ್ರದರ್ಶನ ನಡೆಯಲಿದೆ. ವರಹಾಸ್ವಾಮಿ ದೇವಸ್ಥಾನದ ಗೋಡೆಗೆ ಹೊಂದಿಕೊಂಡಂತೆ 10 ಅಡಿ ಎತ್ತರ ಮತ್ತು 273 ಅಡಿ ಉದ್ದದ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿದೆ. ಹಳೆಯ ಮರದ ಅರಮನೆಯ ಮಾದರಿ, ನಂಜನಗೂಡು ದೇವಸ್ಥಾನದ ಗೋಪುರದ ಮಾದರಿ, ಆನೆಗಾಡಿ ಮತ್ತು ಆನೆಯ ಆಕೃತಿಯನ್ನು ಪುಷ್ಪಗಳಿಂದ ನಿರ್ಮಿಸಲಾಗಿದೆ.
ಮಕ್ಕಳ ಮನರಂಜನೆಗಾಗಿ ಕಾಳಿಂಗ ಸರ್ಪ, ಆಮೆ, ನಕ್ಷತ್ರ ಮೀನು, ಆಕ್ಟೋಪಸ್, ಹನುಮಾನ್, ಸುಖೋಯ್ ವಿಮಾನದ ಆಕೃತಿಗಳನ್ನು ಪುಷ್ಟ ತರಕಾರಿಗಳಿಂದ ನಿರ್ಮಿಸಲಾಗಿದೆ. ಉತ್ಸವದ ಅಂಗವಾಗಿ ಬೊಂಬೆಗಳ ಪ್ರದರ್ಶನ, ಮಕ್ಕಳಹಬ್ಬ ಮತ್ತು ಡಿ.26ರಿಂದ 28 ರವರೆಗೆ ಪಾರಂಪರಿಕ ಸೈಕಲ್ ಸವಾರಿ ಆಯೋಜಿಸಲಾಗಿದೆ.
ನಂಜರಾಜ ಬಹದ್ದೂರು ಛತ್ರದಲ್ಲಿ ಡಿ.27ರಿಂದ ಮೂರು ದಿನ ಮಾಗಿ ಆಹಾರ ಉತ್ಸವ ಮತ್ತು ಕೇಕ್ ಉತ್ಸವ ನಡೆಯಲಿದೆ. ಡಿ.30ರಂದು ದೇವರಾಜ ಅರಸು ರಸ್ತೆಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಡಿ.ರಂದೀಪ್, ಅರಮನೆ ಮಂಡಳಿ ನಿರ್ದೇಶಕ ಸುಬ್ರಮಣ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







