ಮಂಗಳೂರು ಬಸ್ ನಿಲ್ದಾಣದಲ್ಲಿ 2.5ಲಕ್ಷ ರೂ. ಮೊತ್ತದ ಚಿನ್ನಾಭರಣ ಕಳವು: ದೂರು
ಮಂಗಳೂರು, ಡಿ. 24: ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಸುಮಾರು 2.5 ಲಕ್ಷ ಮೊತ್ತದ ಚಿನ್ನಾಭರಣ ಕಳವಾದ ಘಟನೆ ಶನಿವಾರ ಸಂಜೆ ನಡೆದಿದೆ.
ಯಕ್ಷಗಾನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಚಿನ್ನಾಭರಣ ಕಳೆದುಕೊಂಡವರು. ಇವರು ತಮ್ಮ ಊರಾದ ಸುಬ್ರಹ್ಮಣ್ಯಕ್ಕೆ ತೆರಳಲು ಸಂಜೆ 6 ಗಂಟೆಯ ವೇಳೆಗೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ ನಿಲ್ಲುವ ಮುಂಭಾಗದಲ್ಲಿರುವ ಆಸನದಲ್ಲಿ ಮಗುವಿನೊಂದಿಗೆ ಕೆಲವು ಹೊತ್ತು ಕುಳಿತಿದ್ದರು. 6.15ರ ಸುಮಾರಿಗೆ ಬಸ್ ಬಂದಿದ್ದರಿಂದ ಬಸ್ ಹತ್ತಿದ್ದರು. ಆದರೆ ಬಸ್ ಹತ್ತಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್‌ನ ಜಿಪ್ ತೆರೆದಿದ್ದು, ಅದರೊಳಗೆ ಇದ್ದ ಚಿನ್ನಾಭರಣಗಳನ್ನೊಳಗೊಂಡ ಪರ್ಸ್ ಕಾಣೆಯಾಗಿತ್ತು. ತಕ್ಷಣ ಬಸ್ ನಿಂದ ಇಳಿದ ಅವರು ಕುಳಿತಿದ್ದ ಸ್ಥಳದಲ್ಲಿ ಪರಿಶೀಲಿಸಿದಾಗ ಪರ್ಸ್ ಸಿಗಲಿಲ್ಲ ಎನ್ನಲಾಗಿದೆ.
ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಹತ್ತಿರದಲ್ಲೇ ಇಬ್ಬರು ಮಹಿಳೆಯರು ಕುಳಿತು ಅವರೊಂದಿಗೆ ಮಾತನಾಡಿಕೊಂಡಿದ್ದು, ಅವರೇ ಪರ್ಸ್ ಎಗರಿಸಿರುವ ಶಂಕೆ ವ್ಯಕ್ತವಾಗಿದೆ. ಪರ್ಸ್‌ನಲ್ಲಿ ಮೂರು ಚಿನ್ನದ ಸರಗಳು, ಎರಡು ಚಿನ್ನದ ಬಳೆ, ನಾಲ್ಕು ಉಂಗುರ, ಮತ್ತು ಒಂದು ಚಿನ್ನದ ಮೂಗುತಿ ಸೇರಿದಂತೆ ಸುಮಾರು 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





