ಸಾಹಿತ್ಯ ಪ್ರೀತಿ - ವಿಶ್ವಾಸದ ಸೇತುವೆ ನಿರ್ಮಿಸಬೇಕು : ಡಾ.ಸ್ವಾಮಿರಾವ್ ಕುಲಕರ್ಣಿ
ಬೆಂಗಳೂರು, ಡಿ. 24: ಇಂದಿನ ಸಾಹಿತ್ಯ ದ್ವೇಷ, ಅಸೂಯೆ, ಮತ್ಸರದ ಗಡಿಗಳನ್ನು ಕೆಡವಿ ಪ್ರೀತಿ, ವಿಶ್ವಾಸದ ಸೇತುವೆಗಳನ್ನು ನಿರ್ಮಿಸುವ ಕಡೆಗೆ ಕರೆದೊಯ್ಯಬೇಕು ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸ್ವಾಮಿರಾವ್ ಕುಲಕರ್ಣಿ ಕರೆ ನೀಡಿದ್ದಾರೆ.
ರವಿವಾರ ತ್ರಿವೇಣಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಕಸಾಪದಲ್ಲಿ ಹಮ್ಮಿಕೊಂಡಿದ್ದ ಎಸ್.ಮೋಹನ್‌ರಾಯ್ ಅವರ ‘ದುಡ್ಡೇ ದೆವ್ವವಾದಾಗ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ದ್ವೇಷ, ಅಸೂಯೆ, ಅನುಮಾನಗಳಿಂದ ತುಂಬಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯದ ಮೂಲಕ ಮಾನವೀಯ ವೌಲ್ಯಗಳನ್ನು ತುಂಬಬೇಕು. ಇಂದಿನ ಸಾಹಿತಿಗಳು ಈ ನಿಟ್ಟಿನಲ್ಲಿ ಸಾಹಿತ್ಯ ರಚಿಸಬೇಕು ಎಂದರು.
ಪುಸ್ತಕಗಳು ಮನುಷ್ಯನಲ್ಲಿರುವ ಮೋಸ, ಅವಮಾನಿಸುವುದು, ತಪ್ಪು ಮಾಡುವುದು, ತಳ ಮಟ್ಟದಲ್ಲಿ ಯೋಚನೆ ಮಾಡುವುದನ್ನು ದೂರ ಮಾಡುತ್ತದೆ. ಒಬ್ಬ ಸಂಪೂರ್ಣ ಗೌರವಯುತವಾಗಿ ಜೀವನ ರೂಪಿಸುವ, ಮತ್ತೊಬ್ಬರನ್ನು ಒಳಗೊಳ್ಳುವ ಮನುಷ್ಯರನ್ನಾಗಿ ರೂಪಿಸುತ್ತವೆ. ಮನುಷ್ಯನ ಅಂತರಾಳದಲ್ಲಿ ತುಂಬಿ ಹೋಗಿರುವ ಮಾನಸಿಕ ನೋವು-ನಲಿವು, ಅವಮಾನಗಳನ್ನು ದೂರ ಮಾಡುತ್ತದೆ. ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ವಿಜ್ಞಾನ ಬೆಳೆದಾಗ ತತ್ವಜ್ಞಾನ ಬೆಳೆಯುತ್ತದೆ. ಆದರೆ, ಇಂದು ವಿಜ್ಞಾನ ಬೆಳೆಯುವುದರ ಬದಲಿಗೆ ಅಜ್ಞಾನವೇ ಹೆಚ್ಚಾಗುತ್ತಿದೆ. ಶರಣರ ವಚನಗಳು, ಪಂಪನ ನುಡಿ ಮುತ್ತುಗಳು ಸೇರಿದಂತೆ ಗತಗಾಲದ ಸಾಹಿತ್ಯವೇ ಇಲ್ಲದಿದ್ದರೆ, ಇಂದು ನಾವು ಮನುಷ್ಯರಾಗಿ ಉಳಿಯುತ್ತಿರಲಿಲ್ಲ. ಹೀಗಾಗಿ, ಸಾಹಿತ್ಯದ ಜೊತೆಗೆ, ವಿಜ್ಞಾನವನ್ನು ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.
ಪತ್ರಕರ್ತ ಉದಯ ಧರ್ಮಸ್ಥಳ ಮಾತನಾಡಿ, ಇಂದಿನ ಮಾಧ್ಯಮಗಳು ಸಾಹಿತ್ಯವನ್ನು ಬೆಂಬಲಿಸಬೇಕಾದ ತುರ್ತು ಅಗತ್ಯವಿದೆ. ಆದರೆ, ತಮ್ಮ ಟಿಆರ್‌ಪಿಗಾಗಿ ಜ್ಯೋತಿಷ್ಯ, ಕ್ರೈಂ ಹೀಗೆ ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಬೆಳಿಗ್ಗೆ ಯಿಂದ ಸಂಜೆವರೆಗೆ ಅನಗತ್ಯವಾಗಿ ಚರ್ಚೆ ಮಾಡುತ್ತಾರೆ. ಅದರ ಬದಲಿಗೆ ಸಾಹಿತ್ಯವನ್ನು ಬೆಳೆಸುವ ಕೆಲಸವಾಗಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಪಡಶೆಟ್ಟಿ, ರತ್ನಾಮೂರ್ತಿ, ಸುಬ್ರಾಯ ಭಟ್ ಹಾಗೂ ಬನವಾಸಿ ಕೃಷ್ಣಮೂರ್ತಿ ಅವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇತಿಹಾಸಕಾರ ಸುರೇಶ ಮೂನ ಉಪಸ್ಥಿತರಿದ್ದರು.







