ಎಲ್ಲರಲ್ಲೂ ತಾಯಿಯ ಹೃದಯ ಶ್ರೀಮಂತಿಕೆ ಇರಬೇಕು: ಉಮಾಶ್ರೀ
ಕಾಸರಗೋಡು ಚಿನ್ನಾ 60 ತಾರಾಲೋಕ ಸಮಾರಂಭ

ಮಂಗಳೂರು, ಡಿ. 24: ಕಲಾವಿದರಲ್ಲಿ ಮತ್ತು ನಮ್ಮೆಲ್ಲರಲ್ಲೂ ತಾಯಿಯ ಹೃದಯ ಇರಬೇಕು ಹಾಗಿದ್ದಾಗ ನಾವು ಇತರರನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತೆವೆ ಎಂದು ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ರಂಗಭೂಮಿ ಕಲಾವಿದ ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರಿಗೆ 60 ವರ್ಷ ತುಂಬಿದ ಪ್ರಯುಕ್ತ ಅವರ ಅಪ್ತರು ನಗರದ ಪರಭವನದಲ್ಲಿ ಇಂದು ಹಮ್ಮಿಕೊಂಡ ಕಾಸರಗೊಡು ಚಿನ್ನಾ 60 ತಾರಾಲೋಕ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾತೃ ಹೃದಯವನ್ನು ಹೊಂದಿದ್ದಾಗ ನಾವು ಇತರರ ನೋವಿಗೆ ಹೆಚ್ಚು ಸ್ಪಂದಿಸುತ್ತೇವೆ. ಇತರರ ಮಾನ ಹರಾಜು ಮಾಡಲು ಹೋಗುವುದಿಲ್ಲ. ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ಮಾಡಲು ಹೊರಡುತ್ತೆವೆ. ಎಲ್ಲಾ ಅವಮಾನ ನೋವುಗಳನ್ನು ಸಹಿಸುತ್ತೇವೆ. ಕಾಸರಗೊಡು ಚಿನ್ನಾನಂತಹ ಕಲಾವಿದನಲ್ಲಿ ಆ ರೀತಿಯ ಮಾತೃ ಹೃದಯವಿದೆ. ಆದುದರಿಂದ ಆತ ಕಾಸರಗೊಡಿನಿಂದ ಕರ್ನಾಟಕದ ಉದ್ದಗಲಕ್ಕೂ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ .ರಂಗ ಭೂಮಿ, ಕಲೆ , ಸಾಹಿತ್ಯ ಕ್ಷೇತ್ರದ ಬಂಧುವಾಗಿದ್ದಾರೆ ಎಂದು ಹೇಳಿದ ಸಚಿವೆ ಉಮಾಶೀ ನಂತರ ಶುಭ ಹಾರೈಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕಾಸರಗೋಡು ಚಿನ್ನಾ ಗಡಿ ಪ್ರದೇಶದಲ್ಲಿ ಕನ್ನಡದ ಸೇವೆ ಮಾಡುತ್ತಾ ಕಲೆ, ನಾಟಕ, ರಂಗ ಭೂಮಿ ಸಾಹಿತ್ಯ ಕೃತಿ ರಚನೆಯಲ್ಲಿ ತೊಡಗಿಸಿಕೊಂಡಾಗ ಜನ ನನ್ನನ್ನು ಗುರುತಿ ಮನ್ನಣಿ ನೀಡಿರುವುದಕ್ಕೆ ಅಭಾರಿಯಾಗಿದ್ದೇನೆ ಎಂದರು.
ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡುತ್ತಾ ನಮ್ಮ ಸುತ್ತ ಮುತ್ತ ಸಾಂಸ್ಕೃತಿಕ ಧ್ರುವೀಕರಣ ನಡೆಯುತ್ತಿರುವಾಗ ಜಾತ್ಯತೀತ ಮನೋಭಾವದ ಕಲಾ ಕ್ಷೇತ್ರದಲ್ಲಿ ಸತತ ಹುಡುಕಾಟದಲ್ಲಿರುವ ಕಾಸರಗೋಡು ಚಿನ್ನಾ ಮಾದರಿ ಕಲಾವಿದ ಎಂದರು.
ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ , ಡಾ.ನಾ.ದಾಮೋದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಬಿ.ಎ.ವಿವೇಕ ರೈ ವಹಿಸಿ ಶುಭ ಹಾರೈಸಿದರು.







