ಪೊಲೀಸರಿಂದ ಮುಂದುವರಿದ ತನಿಖೆ; ಭೂಗತ ಕೈವಾಡದ ಶಂಕೆ
ಮುಲ್ಕಿ ಉದ್ಯಮಿಯ ಮನೆಗೆ ಗುಂಡು ಹಾರಾಟ ಪ್ರಕರಣ
ಮಂಗಳೂರು, ಡಿ. 24: ಮುಲ್ಕಿಯ ರಾ.ಹೆ. 66ರ ಬದಿಯಲ್ಲಿರುವ ಮುಲ್ಕಿಯ ಉದ್ಯಮಿ ನಾಗರಾಜ್ ಅವರ ಮನೆಗೆ ಶನಿವಾರ ರಾತ್ರಿ ನಡೆದ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಭೂಗತ ಜಗತ್ತಿನ ಕೈವಾಡ ಶಂಕೆ ವ್ಯಕ್ತವಾಗಿದೆ.
ರವಿವಾರ ಬೆಳಗ್ಗೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಡಿಸಿಪಿ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಿಸಿ ಕ್ಯಾಮೆರಾ, ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸುವ ಮೂಲಕ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಉದ್ಯಮಿ ನಾಗರಾಜ್ ಅವರ ಮನೆಗೆ ಶನಿವಾರ ರಾತ್ರಿ ಸುಮಾರು 8.52ಕ್ಕೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಲ್ಲಿ ಓರ್ವ ಹೆಲ್ಮೆಟ್ ಹಾಕಿಕೊಂಡಿದ್ದ. ಮನೆಯ ಗೇಟಿನ ಒಳಗೆ ಬಂದು ಆತ ಬಾಗಿಲಿನ ಕಾಲಿಂಗ್ ಬೆಲ್ ಒತ್ತಿದ್ದಾನೆ. ಮನೆಯವರು ಅನುಮಾನದಿಂದ ಬಾಗಿಲು ತೆರೆಯದಿದ್ದುದನ್ನು ಕಂಡು ಮನೆಯ ಕಿಟಿಕಿ ಮೂಲಕ ಎರಡು ಗುಂಡು ಹಾರಿಸಿದ್ದಾನೆ. ಬಳಿಕ ಮನೆಯ ಎದುರು ಪಾರ್ಕಿಂಗ್ ಮಾಡಿದ್ದ ನಾಗರಾಜ್ ಅವರ ಆಡಿ ಕಾರಿಗೆ ಗುಂಡು ಹಾರಿಸಿ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ನಾಗರಾಜ್ ಉದ್ಯಮಿ ಹಾಗೂ ಗುತ್ತಿಗೆದಾರರಾಗಿದ್ದು, ಅವರಿಗೆ ಸಿಮೆಂಟ್ ಮತ್ತು ಹೋಲೋ ಬ್ಲಾಕ್ ಫ್ಯಾಕ್ಟರಿ ಇದೆ. ಇತ್ತೀಚೆಗೆ ಕೆಲವು ಸಮಯಗಳಿಂದ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವೆಂದು ಹೇಳಲಾಗಿದೆ. ಇದೇ ಕಾರಣಕ್ಕೆ ಶೂಟೌಟ್ ನಡೆಸಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಗರಾಜ್ ಮನೆಗೆ ಶನಿವಾರ ರಾತ್ರಿ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಕುಮಾರ್, ಡಿಸಿಪಿ ಕ್ರೈ ವಿಭಾಗದ ಉಮಾ ಪ್ರಶಾಂತ್, ಸಿಸಿಬಿ ಪೊಲೀಸ್, ಮುಲ್ಕಿ ಪೊಲೀಸ್ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮನೆಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಶಾಸಕರ ಭೇಟಿ: ಶಾಸಕ ಅಭಯಚಂದ್ರ ಜೈನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರಿಂದ ಹಾಗೂ ಪೊಲೀಸರಿಂದ ಮಾಹಿತಿಯನ್ನು ಪಡೆದಿದ್ದಾರೆ.







