ದೇಶದ ಆರ್ಥಿಕತೆ ಕೆಟ್ಟ ಉದ್ಯೋಗ ಸೃಷ್ಟಿಸುವಲ್ಲಿ ನಿರತವಾಗಿದೆ: ಪ್ರೊ.ಅಮಿತ್ ಬಾಸೊಲೆ

ಬೆಂಗಳೂರು, ಡಿ.24: ಭಾರತದ ಆರ್ಥಿಕತೆ ಕೆಟ್ಟ ಉದ್ಯೋಗವನ್ನು ಸೃಷ್ಟಿಸುವಲ್ಲಿ ನಿರತವಾಗಿದೆ. ಕೇವಲ ಬಂಡವಾಳಶಾಹಿಗಳಿಗೆ ಅಗತ್ಯವಾದ ಉದ್ಯೋಗ ಸೃಷ್ಟಿಯಿಂದ ಉದ್ಯೋಗ ಭದ್ರತೆಯಾಗಲಿ, ಸೃಜನಾತ್ಮಕತೆಯಾಗಲಿ ಇರುವುದಿಲ್ಲ. ಇಂತಹ ಉದ್ಯೋಗಗಳಿಂದ ದೇಶಕ್ಕೆ ಯಾವುದೇ ಪ್ರಯೋಜವಾಗುವುದಿಲ್ಲ ಎಂದು ಅಜೀಂ ಪ್ರೇಮ್‌ಜಿ ವಿವಿ ಮುಖ್ಯಸ್ಥ ಪ್ರೊ.ಅಮಿತ್ ಬಾಸೊಲೆ ಬೇಸರ ವ್ಯಕ್ತಪಡಿಸಿದರು.
ರವಿವಾರ ಉದ್ಯೋಗಕ್ಕಾಗಿ ಯುವಜನರು ವೇದಿಕೆ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತ ಮತ್ತು ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯಲ್ಲಿನ ಸಮಸ್ಯೆಗಳು ಮತ್ತು ಸಾಧ್ಯತೆಗಳು ವಿಚಾರ ಸಂಕಿಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಜಿಡಿಪಿ ಹೆಚ್ಚಾದ ಮಾತ್ರಕ್ಕೆ ಜನತೆಗೆ ಎಲ್ಲವೂ ಸಿಕ್ಕುವುದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ದಿನದಲ್ಲಿ ಬಹುತೇಕ ಉದ್ಯೋಗದಲ್ಲಿ ಪಿಎಫ್, ಆರೋಗ್ಯವಿಮೆ ಸೇರಿದಂತೆ ಉದ್ಯೋಗ ಭದ್ರತೆ ಇತ್ತು. ಆದರೆ, ಈಗ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳು ಗುತ್ತಿಗೆದಾರರ ಪಾಲಾಗುತ್ತಿದೆ. ಇಲ್ಲಿ ಉದ್ಯೋಗಿಗಳು ಸದಾ ಒತ್ತಡ ಹಾಗೂ ಗುಲಾಮ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಅವರು ವಿಷಾಧಿಸಿದರು.
ನಿರುದ್ಯೋಗ ಸಮಸ್ಯೆ ವ್ಯಕ್ತಿಗತವಲ್ಲ. ಅದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಉದ್ಯೋಗವನ್ನು ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಉದ್ಯೋಗವೆಂಬುದು ಮೂಲಭೂತ ಹಕ್ಕುಗಳಂತೆಯೇ ಅಗತ್ಯವಾದುದಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಉದ್ಯೋಗಕ್ಕಾಗಿ ಅಂದೋಲನ ರೂಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಪಾರಂಪರಿಕವಾಗಿ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಕೌಶಲ್ಯವಿದೆ. ಈ ಕೌಶಲ್ಯದಿಂದಲೇ ನೂರಾರು ವರ್ಷಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಬಂದಿದ್ದಾರೆ. ಈ ಕೌಶಲ್ಯಗಳಿಗೆ ಪೂರಕವಾಗಿ ಉದ್ಯೋಗಗಳು ಸೃಷ್ಟಿಯಾಗಬೇಕಾಗಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಬಂಡವಾಳಶಾಹಿಗಳಿಗೆ ಪೂರಕವಾದಂತಹ ಉದ್ಯೋಗ ಸೃಷ್ಟಿಯಾಗುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಉದ್ಯೋಗಕ್ಕಾಗಿ ಯುವಜನ ವೇದಿಕೆಯ ಸಂಚಾಲಕ ಮುತ್ತುರಾಜ್ ಮಾತನಾಡಿ , ದುಡಿಯುವ ಕೆಲಸಗಳಿಗೆ ಸೂಕ್ತ ಉದ್ಯೋಗ ಸಿಕ್ಕರೆ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಆದರೆ, ನಮ್ಮ ಜನಪ್ರತಿನಿಧಿಗಳು ಯುವಕರನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಚುನಾವಣೆಯಲ್ಲಿ ದಾಳಗಳಾಗಿ ಬಳಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆಯೇ ವಿನಃ ಯುವಕರ ಸ್ವಾಭಿಮಾನದ ಬದುಕಿಗೆ ಅಗತ್ಯವಾದ ಉದ್ಯೋಗ ಸೃಷ್ಟಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಅಪಾಧಿಸಿದರು.
ಹಾಗೆ ನೋಡಿದರೆ ರಾಜ್ಯ ಸರಕಾರ ಕಿಂಚಿತ್ ಮನಸು ಮಾಡಿದರೂ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳು ಖಾಲಿಯಿವೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಮಾರ್ಗದರ್ಶಕರಾಗಿ ಹಲವು ಉದ್ಯೋಗಳನ್ನು ಸೃಷ್ಟಿಸಬಹುದು. ಇನ್ನು ಹಲವು ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಬಹುದಾದ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಸಂಚಾಲಕ ಸರೋವರ್ ಬೆಂಕಿಕೆರೆ, ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್, ಕರ್ನಾಟಕ ಜನಶಕ್ತಿ ಸಂಘಟನೆಯ ವಾಸು, ಮಹಿಳಾ ಮುನ್ನಡೆಯ ಮಲ್ಲಿಗೆ ಮತ್ತಿತರರಿದ್ದರು.
ದೇಶದಲ್ಲಿ ಶೇ.78ರಷ್ಟು ಮಂದಿ 10ಸಾವಿರ ರೂ.ಗಿಂತ ಕಡಿಮೆ ಆಧಾಯದಲ್ಲಿ ಜೀವನ ನಡೆಸುತ್ತಿದ್ದಾರೆ. ಸರಕಾರ ಕನಿಷ್ಟ ವೇತನವನ್ನು 18ಸಾವಿರಕ್ಕೆ ನಿಗಧಿ ಪಡಿಸಿದೆ. ಹಾಗೂ ಸರಕಾರದ ಡಿ ದರ್ಜೆ ನೌಕರರ ಪ್ರಾರಂಭಿಕ ವೇತನ ಕನಿಷ್ಟ 20ಸಾವಿರ ರೂ. ಇದೆ. ಹೀಗಾಗಿ ದೇಶದಲ್ಲಿ ಶೇ.50ರಷ್ಟು ಮಂದಿ ಅತ್ಯಂತ ಕೆಳ ದರ್ಜೆಯ ಜೀವನ ನಡೆಸುತ್ತಿರುವುದು ಸರಕಾರದ ಗಮನಕ್ಕೆ ಬಂದಿರಲೇಬೇಕು. ಆದರೂ ಬಡವರ ಬದುಕನ್ನು ಉತ್ತಮಗೊಳಿಸುವುದನ್ನು ಪ್ರಧಾನ ಆದ್ಯತೆಯಾಗಿ ಪರಿಗಣಿಸದೇ ಇರುವುದು ವಿಷಾಧನೀಯ.
-ಪ್ರೊ.ಅಮಿತ್ ಬಾಸೊೆ ಅಜೀಂ ಪ್ರೇಮ್‌ಜಿ ವಿವಿ ಮುಖ್ಯಸ್ಥ







