ಚೀನಾದಿಂದ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನದ ಚೊಚ್ಚಲ ಹಾರಾಟ

►ನೆಲ, ನೀರಿನಿಂದ ಮೇಲಕ್ಕೇರುವ ಸಾಮರ್ಥ್ಯ
►ಒಮ್ಮೆಗೆ 50 ಮಂದಿಯನ್ನು ಕೊಂಡೊಯ್ಯಬಲ್ಲದು
►12ತಾಸು ನಿರಂತರ ಹಾರಾಡಬಲ್ಲದು
►ಮಿಲಿಟರಿ ಉದ್ದೇಶಕ್ಕೆ ಬಳಕೆ
ಬೀಜಿಂಗ್,ಡಿ.24: ನೆಲ, ಜಲಗಳೆರಡರಲ್ಲೂ ಹಾರಾಟ ಆರಂಭಿಸಬಲ್ಲ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನವೆಂಬ ದಾಖಲೆಗೆ ಪಾತ್ರವಾಗಿರುವ ಚೀನಾದ ಸ್ವದೇಶಿ ನಿರ್ಮಿತ ಎಜಿ600, ರವಿವಾರ ತನ್ನ ಚೊಚ್ಚಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.
‘‘ಕುನ್‌ಲೊಂಗ್’’ ಎಂಬ ಸಂಕೇತನಾಮ ಹೊಂದಿರುವ ಈ ವಿಮಾನವು ದಕ್ಷಿಣದ ಝುಹಾಯಿ ನಗರದಿಂದ ತನ್ನ ಹಾರಾಟವನ್ನು ಆರಂಭಿಸಿದ್ದು, ಸುಮಾರು ಒಂದು ತಾಸಿನ ಹಾರಾಟದ ಬಳಿಕ ಭೂಸ್ಪರ್ಶ ಮಾಡಿದೆ.
127 ಅಡಿ ರೆಕ್ಕೆಯನ್ನು ಹೊಂದಿರುವ ಹಾಗೂ ನಾಲ್ಕು ಟರ್ಬೊಪ್ರೊಪ್ ಎಂಜಿನ್‌ಗಳಿಂದ ಚಾಲಿತವಾಗುವ ಈ ವಿಮಾನವು 50 ಮಂದಿಯನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಸುಮಾರು 12 ತಾಸುಗಳ ಕಾಲ ಅದು ಗಗನದಲ್ಲಿ ಹಾರಾಡಬಲ್ಲದು ಎಂದು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
‘‘ಈ ಯಶಸ್ವಿ ಚೊಚ್ಚಲ ಹಾರಾಟದೊಂದಿಗೆ ಚೀನಾವು ಬೃಹತ್ ಉಭಯಚರ ವಿಮಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ’’ಎಂದು ಎಜಿ600 ವಿಮಾನದ ಮುಖ್ಯವಿನ್ಯಾಸಕಾರ ಹುವಾಂಗ್ ಲಿಂಗ್ಸಾಯಿ ಹೇಳಿದ್ದಾರೆ.
ಈ ಉಭಯಚರ ವಿಮಾನದಲ್ಲಿ ಮಿಲಿಟರಿ ಅಪ್ಲಿಕೇಶನ್‌ಗಳಿದ್ದು, ಅದನ್ನು ಅಗ್ನಿಶಾಮಕ ಹಾಗೂ ನೌಕಾ ರಕ್ಷಣೆ ಕಾರ್ಯಾಚರಣೆಗಳಲ್ಲಿ ಬಳಸಲಾಗುವುದು ಎಂದವರು ತಿಳಿಸಿದ್ದಾರೆ.
ಈ ವಿಮಾನದ 4500 ಕಿ.ಮೀ.ವರೆಗಿನ ಕಾರ್ಯಾಚರಣೆ ಸಾಮರ್ಥ್ಯ ಹಾಗೂ ಭೂಮಿ ಹಾಗೂ ಜಲದಿಂದಲೂ ಮೇಲಕ್ಕೇರುವ ಅದರ ಸಾಮರ್ಥ್ಯವು, ಅದನ್ನು ಚೀನಾದ ಕೃತಕ ದ್ವೀಪಗಳಲ್ಲಿ ನಿಯೋಜಿಸಲು ಯೋಗ್ಯವಾಗುವಂತೆ ಮಾಡಿದೆ’’ ಎಂದು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿವಿಯ ಸೇನಾ ವಿಶ್ಲೇಷಕ ಜೇಮ್ಸ್ ಚಾರ್ ತಿಳಿಸಿದ್ದಾರೆ.







