ವಿಶ್ವಸಂಸ್ಥೆಯಿಂದ ‘ಯುದ್ಧದ ಕೃತ್ಯ’: ಉ.ಕೊರಿಯ
ಭದ್ರತಾ ಮಂಡಳಿಯ ನೂತನ ನಿರ್ಬಂಧಗಳ ವಿರುದ್ಧ ಆಕ್ರೋಶ

ಸೋಲ್,ಡಿ.24:ವಿಶ್ವಸಮುದಾಯದಿಂದ ವ್ಯಾಪಕ ಖಂಡನೆಗೊಳಗಾದ ಸರಣಿ ಖಂಡಾಂತರ ಕ್ಷಿಪಣಿ ಪರೀಕ್ಷೆಗಳಿಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ವಿರುದ್ಧ ನೂತನ ನಿರ್ಬಂಧಗಳನ್ನು ಹೇರಿರುವ ವಿರುದ್ಧ ಉತ್ತರ ಕೊರಿಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ‘ಯುದ್ಧದ ಕೃತ್ಯ’ವೆಂದು ಬಣ್ಣಿಸಿದೆ.
‘‘ ವಿಶ್ವಸಂಸ್ಥೆಯ ನೂತನ ನಿರ್ಬಂಧಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಇದು ನಮ್ಮ ಗಣರಾಜ್ಯದ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ ಹಾಗೂ ಕೊರಿಯ ಪರ್ಯಾಯ ದ್ವೀಪ ಹಾಗೂ ವಿಶಾಲ ಪ್ರಾಂತದ ಶಾಂತಿ ಹಾಗೂ ಸ್ಥಿರತೆಯನ್ನು ನಾಶಪಡಿಸುವಂತಹ ಯುದ್ಧದ ಕೃತ್ಯವಾಗಿದೆ’’ ಎಂದು ಉತ್ತರ ಕೊರಿಯದ ವಿದೇಶಾಂಗ ಸಚಿವಾಲಯವು ತಿಳಿಸಿರುವುದಾಗಿ, ಸರಕಾರಿ ಸ್ವಾಮ್ಯದ ಕೆಸಿಎನ್‌ಎ ಸುದ್ದಿಸಂಸ್ಥೆಯು ವರದಿ ಮಾಡಿದೆ.
ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಉ.ಕೊರಿಯಕ್ಕೆ ತೈಲ ಪೂರೈಕೆಯನ್ನು ನಿರ್ಬಂಧಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವನ್ನು ಭದ್ರತಾ ಮಂಡಳಿಯು ಶನಿವಾರ ಅವಿರೋಧವಾಗಿ ಅಂಗೀಕರಿಸಿದ ಬಳಿಕ, ವ್ಯೊಂಗ್‌ಯಾಂಗ್ ನೀಡಿದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ. ಉತ್ತರ ಕೊರಿಯದ ಆಪ್ತರಾಷ್ಟ್ರವಾದ ಚೀನಾ ಕೂಡಾ ಈ ನಿರ್ಣಯವನ್ನು ಬೆಂಬಲಿಸಿತ್ತು. ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಉತ್ತರ ಕೊರಿಯದ ಪ್ರಜೆಗಳನ್ನು ಕೂಡಾ ಅವರ ತಾಯ್ನಾಡಿಗೆ ವಾಪಸ್ ಕಳುಹಿಸಲು ಈ ನಿರ್ಣಯವು ಅವಕಾಶ ನೀಡುತ್ತದೆ.
ಅಮೆರಿಕದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯವಿದೆಯೆಂದು ಹೇಳಲಾದ ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯ ಪರೀಕ್ಷಿಸಿದ ಮೂರು ವಾರಗಳ ಬಳಿಕ ಉತ್ತರ ಕೊರಿಯ ಈ ನಿರ್ಬಂಧವನ್ನು ವಿಧಿಸಿದೆ.







