ಪ್ರವಾದಿ ಮುಹಮ್ಮದ್ ಮಾನವ ಕುಲದ ರೂವಾರಿ : ಮುಹಮ್ಮದ್ ಕುಂಞಿ

ಮಂಡ್ಯ, ಡಿ.24: ನಗರದ ಬೀಡಿ ಕಾಲನಿಯ ಕೆರೆಯಂಗಳದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಪ್ರವಾದಿ ಮುಹಮ್ಮದ್‍ರವರ ಜೀವನದ ಬೆಳಕಿನಲ್ಲಿ ಕಾರ್ಯಕ್ರಮ ನಡೆಯಿತು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಪ್ರವಾದಿ ಮುಹಮ್ಮದರು ಮಾನವ ಕುಲದ ಮೇಲೆ ಪ್ರಭಾವ ಬೀರಿದ ಮತ್ತು ಸಕಲ ಮಾನವ ಕುಲದ ರೂವಾರಿಯಾಗಿದ್ದಾರೆ ಎಂದರು.
ಜಗತ್ತಿನಲ್ಲಿ ಎಲ್ಲರೂ ನನ್ನಂತೆ ಮನುಷ್ಯರು, ಎಲ್ಲರೂ ನನ್ನವರು ಎಂದು ತಿಳಿದಿದ್ದರು. ಆದರೂ ಅವರನ್ನು ನಿಂದಿಸುವುದು, ದ್ವೇಷಿಸುವುದನ್ನು ಕೆಲವರು ಮಾಡುತ್ತಿದ್ದರು ಎಂದು ವಿಷಾದಿಸಿದರು.
ಜಗತ್ತಿನಲ್ಲಿ ಮನುಷ್ಯನನ್ನು ಗೌರವದಿಂದ ಕಾಣಬೇಕು ಎಂದು ಒಂದು ದೊಡ್ಡ ಸಂದೇಶ ಕೊಟ್ಟರು. ಉತ್ತರದಾಯಿತ್ವದ ಪ್ರಜ್ಞೆ ಇರಬೇಕು ಎಂದು ಮುಹಮ್ಮದ್ ಪ್ರತಿಪಾದಿಸಿದರು ಎಂದು ಅವರು ಹೇಳಿದರು.
ಜನರಿಗೆ ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಮನುಷ್ಯ ನೀರಿಗಾಗಿ ಕಷ್ಟಪಡುತ್ತಿದ್ದಾನೆ. ನೀರು ಆಧುನಿಕ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಎಂ.ಎಸ್. ಆತ್ಮಾನಂದ, ಎಚ್. ಹೊನ್ನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುನಾವರ್‍ಖಾನ್, ಜೆಡಿಎಸ್ ಮುಖಂಡ ಅಶೋಕ್ ಜಯರಾಂ, ಮೌಲಾನಾ ಉಮರ್ ಫಾರೂಕ್, ಹಾಫಿಜ್ ಮಹಮದ್ ಇಸ್‍ಹಾಖ್, ತಜಮ್ಮುಲ್ ತನ್ವೀರ್, ಸೈಯ್ಯದ್ ಅಝ್‍ಹರ್ ಮದನಿಖಾಸ್ಮಿ, ಇತರರು ಭಾಗವಹಿಸಿದ್ದರು.







