ಇಂಟರ್‌ನೆಟ್ ಮೇಲೆ ಚೀನಾದ ಬಿಗಿಮುಷ್ಟಿ: 13 ಸಾವಿರ ವೆಬ್‌ಸೈಟ್‌ಗಳಿಗೆ ನಿಷೇಧ

ಬೀಜಿಂಗ್,ಡಿ.24: ದೇಶದ ಅಂತರ್ಜಾಲದ ನಿಯಮಗಳ ಉಲ್ಲಂಘನೆಗಾಗಿ ಚೀನಾವು 2015ರಿಂದೀಚೆಗೆ 13 ಸಾವಿರ ವೆಬ್‌ಸೈಟ್‌ಗಳನ್ನು ಮುಚ್ಚುಗಡೆಗೊಳಿಸಿದೆ ಅಥವಾ ಅವುಗಳ ಪರವಾನಿಗೆಯನ್ನು ರದ್ದುಪಡಿಸಿದೆ ಎಂದು ಸರಕಾರಿ ಮಾಧ್ಯಮವೊಂದು ರವಿವಾರ ವರದಿ ಮಾಡಿದೆ.
ಈಗಾಗಲೇ ಇಂಟರ್‌ನೆಟ್ ಮೇಲಿನ ತನ್ನ ಬಿಗಿನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು ಚೀನಾದ ಕಮ್ಯೂನಿಸ್ಟ್ ಸರಕಾರ ಮುಂದಾಗಿರುವ ಸಂದರ್ಭದಲ್ಲೇ ಈ ಸುದ್ದಿ ಹೊರಬಿದ್ದಿದೆ. 2012ರಲ್ಲಿ ಕ್ಸಿಜಿನ್‌ಪಿಂಗ್ ಚೀನಾದ ಅಧ್ಯಕ್ಷರಾಗಿ ಅಧಿ ಕಾರಕ್ಕೇರಿದ ಬಳಿಕ ಆ ದೇಶದಲ್ಲಿ ಅಂತರ್ಜಾಲದ ಮೇಲೆ ಬಿಗಿ ನಿಯಂತ್ರಣ ಹೇರುವ ಪ್ರಕ್ರಿಯೆ ತ್ವರಿತಗೊಂಡಿತ್ತು.
ಸೇವಾ ಪ್ರೊಟೊಕೊಲ್ ಉಲ್ಲಂಘನೆಯ ಆರೋಪದಲ್ಲಿ 1 ಕೋಟಿಗೂ ಅಧಿಕ ಸಾಮಾಜಿಕ ಜಾಲತಾಣಗಳನ್ನು ರದ್ದುಪಡಿಸಲಾಗಿದೆಯೆಂದು ಚೀನಾದ ಅಧಿಕೃತ ಸುದ್ದಿಸಂಸ್ಥೆ ‘ಕ್ಸಿನುವಾ’ ರವಿವಾರ ವರದಿ ಮಾಡಿದೆ.
ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಇಂಟರ್‌ನೆಟ್ ಬಳಕೆದಾರರನ್ನು ಹೊಂದಿರುವ ರಾಷ್ಟ್ರವಾದ ಚೀನಾವು, ಅತ್ಯಂತ ನಿರ್ಬಂಧಿತ ಆನ್‌ಲೈನ್ ನಿರ್ಬಂಧಗಳನ್ನು ಹೊಂದಿರುವ ಜಗತ್ತಿನ 65 ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆಯೆಂದು ಅಮೆರಿಕದ ಚಿಂತನವೇದಿಕೆಯಾದ ‘ಫ್ರೀಡಂ ಹೌಸ್’ 2015ರಲ್ಲಿ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿತ್ತು.
ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಗೂಗಲ್,ಫೇಸ್‌ಬುಕ್, ಟ್ವಿಟ್ಟರ್ ಹಾಗೂ ನ್ಯೂಯಾರ್ಕ್‌ಟೈಮ್ಸ್ ಆನ್‌ಲೈನ್ ದಿನಪತ್ರಿಕೆಯನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.







