ಮಂಡ್ಯ : ವಿಭಾಗಮಟ್ಟದ ಪುರುಷರ ಕಬಡ್ಡಿ ಉತ್ಸವಕ್ಕೆ ಚಾಲನೆ

ಮಂಡ್ಯ, ಡಿ.24: ರೈತ ದಿನದ ಅಂಗವಾಗಿ ಆಗ್ರ್ಯಾನಿಕ್ ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಮೈಸೂರು ವಿಭಾಗಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಮಂಡ್ಯ ತಾಲೂಕಿನ ಹಳ್ಳಿಗಳಲ್ಲಿ ಕಟ್ಟಿರುವ 36 ತಂಡ ಸೇರಿದಂತೆ ಮೈಸೂರು ವಿಭಾಗದ ಜಿಲ್ಲೆಗಳಿಂದ ಸುಮಾರು 40 ತಂಡಗಳು ಭಾಗವಹಿಸಿವೆ. ವಿಜೇತ ತಂಡಗಳಿಗೆ 30 ರೂ. ಪ್ರಥಮ, 20 ಸಾವಿರ ರೂ. ದ್ವಿತೀಯ, 10 ಸಾವಿರ ರೂ. ತೃತೀಯ ಮತ್ತು ನಾಲ್ಕನೆ ಬಹುಮಾನ ನೀಡಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಇ.ಅಶ್ವತ್ಥನಾರಾಯಣ್, ಕಬಡ್ಡಿ ಕ್ರೀಡೆಯಿಂದ ಆರೋಗ್ಯ ವೃದ್ಧಿ ಜತೆಗೆ, ಗ್ರಾಮ, ರಾಜ್ಯ, ದೇಶಗಳ ಸಂಬಂಧ ಬೆಳೆಯುತ್ತದೆ ಎಂದರು.
ರಾಜ್ಯದ ಕಬಡ್ಡಿ ಇತಿಹಾಸದಲ್ಲಿ ಮಂಡ್ಯ ಜಿಲ್ಲೆಗೆ ತನ್ನದೇ ವಿಶೇಷ ಪಾತ್ರವಿದೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಪಿ.ಎಂ.ಸೋಮಶೇಖರ್ ಸೇರಿದಂತೆ ಹಲವರು ಕಬಡ್ಡಿ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಸನ್ನ ಎನ್.ಗೌಡ ಮಾತನಾಡಿ, ಮಧು ಚಂದನ್ ಲಕ್ಷಾಂತರ ವೇತನದ ಹುದ್ದೆ ಬಿಟ್ಟು ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದಾರೆ. ಕಬಡ್ಡಿ ಪಂದ್ಯದ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಸದಸ್ಯ ಚಂದ್ರಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ಅರವಿಂದ್, ಗ್ರಾಮಾಂತರ ಅಧ್ಯಕ್ಷ ಪ.ನಾ. ಸುರೇಶ್, ಬಿಜೆಪಿ ಅಭಿವೃದ್ಧಿ ಪ್ರಕೋಷ್ಠದ ಡಾ.ಸದಾನಂದ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಹ ಕಾರ್ಯದರ್ಶಿ ಪುಟರ್‍ಮಲ್ ಜೈನ್, ಆಗ್ರ್ಯಾನಿಕ್ ಮಂಡ್ಯದ ಸಿಇಓಕಾರಸವಾಡಿ ಮಹದೇವು, ಇತರರು ಹಾಜರಿದ್ದರು.
ಇದೇ ವೇಳೆ ಕಬಡ್ಡಿಪಟುಗಳಾದ ಪುಟ್ಟಸ್ವಾಮಿ, ಚಿನ್ನೇಗೌಡ, ಶಿವಲಿಂಗಯ್ಯ, ನಂಜುಂಡಸ್ವಾಮಿ, ವರದರಾಜು ಅವರನ್ನು ಸನ್ಮಾನಿಸಲಾಯಿತು.







