ಟರ್ಕಿ: 2,756 ಸರಕಾರಿ ಉದ್ಯೋಗಿಗಳ ವಜಾ
.jpg)
ಅಂಕಾರ,ಡಿ.24: ಕಳೆದ ವರ್ಷದ ವಿಫಲ ಸೇನಾ ಬಂಡಾಯದ ಬಳಿಕ, ಆಡಳಿತ ವಿರೋಧಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಟರ್ಕಿ ಸರಕಾರವು, ತೀವ್ರವಾದಿ ಗುಂಪುಗಳ ಜೊತೆ ನಂಟು ಹೊಂದಿದ್ದಾರೆಂದು ಆರೋಪಿಸಿ ರವಿವಾರ ಸಾರ್ವಜನಿಕ ಸೇವಾ ವಲಯದ 2,756ಕ್ಕೂ ಅಧಿಕ ಮಂದಿ ಉದ್ಯೋಗಿಗಳನ್ನು ಉಚ್ಚಾಟಿಸಿದೆ.
ಇಂದು ಸೇವೆಯಿಂದ ಉಚ್ಚಾಟನೆಗೊಂಡವರಲ್ಲಿ 637 ಸೇನಾ ಸಿಬ್ಬಂದಿ, ಸಶಸ್ತ್ರಪಡೆಗಳ 360 ಯೋಧರು ಹಾಗೂ 150 ಉಪನ್ಯಾಸಕರು ಮತ್ತಿತರ ವಿಶ್ವವಿದ್ಯಾನಿಲಯ ಸಿಬ್ಬಂದಿ ಸೇರಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
2016ರ ಜುಲೈನಲ್ಲಿ ನಡೆದ ಸೇನಾ ಬಂಡಾಯದ ಹಿಂದೆ ಅಮೆರಿಕದಲ್ಲಿ ನೆಲೆಸಿರುವ ಮುಸ್ಲಿಂ ಧರ್ಮಗುರು ಫತುಲ್ಲಾ ಗುಲೆನ್ ಅವರ ಕೈವಾಡವಿದೆಯೆಂದು ಟರ್ಕಿ ಸರಕಾರ ಆಪಾದಿಸುತ್ತಿದೆ. ಗುಲೆನ್ ಬೆಂಬಲಿಗ ಗುಂಪುಗಳ ಜೊತೆ ನಂಟು ಹೊಂದಿದ ಆರೋಪದಲ್ಲಿ ಎರ್ದೊಗಾನ್ ಸರಕಾರವು ಈವರೆಗೆ 50 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ ಹಾಗೂ 1.10 ಲಕ್ಷಕ್ಕೂ ಅಧಿಕ ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದೆ.
ಗುಲೆನ್ ಅವರ ಸರಕಾರಿ ವಿರೋಧಿ ಚಳವಳಿಯಿಂದ ಮುಂದುವರಿದಿರುವ ಬೆದರಿಕೆಯನ್ನು ಹತ್ತಿಕ್ಕಲು ಇಂತಹ ಕ್ರಮಗಳು ಅಗತ್ಯವಾಗಿದೆಯೆಂದು ಸರಕಾರ ಹೇಳಿಕೊಂಡಿದೆ. ಆದರೆ ಸೇನಾಬಂಡಾಯದಲ್ಲಿ ತಾನು ಶಾಮೀಲಾಗಿರುವುದನ್ನು ಗುಲೆನ್ ನಿರಾಕರಿಸಿದ್ದಾರೆ.







