ಅತಿಥಿ ಗೃಹದ ವಾಸ್ತವ್ಯ ದಾಖಲೆಯನ್ನು ತಿರುಚಲಾಗಿದೆ : ಹಿರಿಯ ವಕೀಲರ ಆರೋಪ
ನ್ಯಾ. ಲೋಯಾ ಸಾವು ಪ್ರಕರಣ

ನಾಗ್‌ಪುರ, ಡಿ.24: ನಾಗ್‌ಪುರದಲ್ಲಿರುವ ಸರಕಾರಿ ಅಧೀನದ ವಿಐಪಿ ಅತಿಥಿಗೃಹ ‘ರವಿ ಭವನ’ದಲ್ಲಿ ಉಳಿದುಕೊಳ್ಳುವ ಅತಿಥಿಗಳ ದಾಖಲೆ ನಮೂದಿಸುವ ‘ವಾಸ್ತವ್ಯ ನೋಂದಣಿ’ ಪುಸ್ತಕದಲ್ಲಿ ತಾನು ಬರೆದಿದ್ದ ಒಂದು ಉಲ್ಲೇಖವನ್ನು ತಿರುಚಲಾಗಿದೆ ಎಂದು ವಕೀಲ ಮಿಲಿಂದ್ ಪಖಲೆ ಎಂಬವರು ಆರೋಪಿಸಿದ್ದಾರೆ.
2014ರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ನ್ಯಾಯಾಧೀಶ ಬೃಜ್‌ಗೋಪಾಲ್ ಹರ್‌ಕಿಷನ್ ಲೋಯಾ ಅವರು , ನವೆಂಬರ್ 30 ಮತ್ತು ಡಿಸೆಂಬರ್ 1ರ ಅವಧಿಯ ರಾತ್ರಿ ಈ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದರು ಮತ್ತು ಇಲ್ಲಿ ಕೊನೆಯುಸಿರೆಳೆದಿದ್ದರು. ಮಿಲಿಂದ್ ಪಖಲೆ ಮಾಡಿರುವ ನಮೂದಿನ ಜತೆಯಲ್ಲೇ ಲೋಯಾ ವಾಸ್ತವ್ಯವಿದ್ದ ಕುರಿತಾದ ವಿವರ ನಮೂದಿಸಲಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು. ನ್ಯಾ. ಲೋಯಾ ವಾಸ್ತವ್ಯಕ್ಕೆ ಸಂಬಂಧಿಸಿದ 2 ನೋಂದಣಿಗಳ ಸ್ವಲ್ಪ ಮೊದಲು ಪಕಲೆಯವರ ವಾಸಗತವ್ಯದ ನಮೂದಿದೆ.
ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಲೋಯಾ , ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯದ ಮುಖ್ಯಸ್ಥರಾಗಿದ್ದರು. ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಮುಖ ಆರೋಪಿಯಾಗಿದ್ದರು. ಲೋಯಾ ಸಾವಿನ ಕುರಿತು ಲೋಯಾ ಕುಟುಂಬ ವರ್ಗದವರು ಹಾಗೂ ಸಹವರ್ತಿಗಳು ಸಂಶಯ ವ್ಯಕ್ತಪಡಿಸಿದ್ದರು. ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ತಾವು ನೀಡಲಿರುವ ತೀರ್ಪಿನ ಮೇಲೆ ಪ್ರಭಾವ ಬೀರಲು ಅಂದಿನ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಸೇರಿದಂತೆ ಹಲವು ಪ್ರಭಾವೀ ವ್ಯಕ್ತಿಗಳು ಪ್ರಯತ್ನಿಸಿದ್ದರು ಎಂದು ಲೋಯಾ ತಿಳಿಸಿದ್ದರು ಎಂದು ಕುಟುಂಬವರ್ಗದವರು ಈ ಹಿಂದೆ ಆರೋಪಿಸಿದ್ದರು.
ಮಿಲಿಂದ್ ಪಖಲೆ 2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿ ಎಂಬಲ್ಲಿ ನಡೆದ ದಲಿತರ ಸಾಮೂಹಿಕ ಹತ್ಯಾಕಾಂಡದ ತನಿಖೆಗಾಗಿ ನೇಮಿಸಲಾದ ಖೈರ್ಲಾಂಜಿ ಕ್ರಿಯಾ ಸಮಿತಿಯ ಸಂಯೋಜಕರಾಗಿದ್ದರು.
2014ರ ನವೆಂಬರ್ 30ರಂದು ಸರಕಾರಿ ದಾಖಲೆಯಲ್ಲಿದ್ದ ಕೆಲವು ನಮೂದು(ಉಲ್ಲೇಖ)ಗಳನ್ನು ಕೆಲವರು ತಿರುಚಿದ್ದಾರೆ. ಕೆಲವು ಮಾಹಿತಿಗಳನ್ನು ಅಳಿಸಿಹಾಕುವ ಪ್ರಯತ್ನದಲ್ಲಿ ದಾಖಲೆ ಪುಸ್ತಕವನ್ನು ಹಾಳುಗೆಡವಿದ ಬಳಿಕ ನಕಲಿ ನೋಂದಣಿ ಪುಸ್ತಕವನ್ನು ತಯಾರಿಸಿ ಅದನ್ನು ಈಗ ಬಳಸಲಾಗುತ್ತಿದೆ ಎಂದು ಮಿಲಿಂದ್ ಪಖಲೆ ನಾಗ್‌ಪುರದ ಸದಾರ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು caravanmagazine.in ವರದಿ ಮಾಡಿದೆ. ಈ ದೂರಿನ ಪ್ರತಿಯನ್ನು ಅವರು , ಅತಿಥಿಗೃಹದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಾಗ್‌ಪುರದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ಗೂ ಕಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯನಿರ್ವಾಹಕ ಇಂಜಿನಿಯರ್, ಈಗ ವಿಧಾನಸಭೆಯ ಕಲಾಪ ನಡೆಯುತ್ತಿರುವ ಕಾರಣ ದೂರಿನ ಬಗ್ಗೆ ಗಮನ ಹರಿಸಿಲ್ಲ. ಕ್ರಿಸ್‌ಮಸ್ ಬಳಿಕ ಈ ಬಗ್ಗೆ ಗಮನ ಹರಿಸುತ್ತೇನೆ ಎಂದಿದ್ದಾರೆ.
2014ರಂದು ಅತಿಥಿಗೃಹಕ್ಕೆ ಆಗಮಿಸಿದ ಹಾಗೂ ತೆರಳಿದ ಕುರಿತು ಉಲ್ಲೇಖವನ್ನು ತನ್ನ ಕೈಬರಹದಲ್ಲಿ ಮಾಡಿದ್ದೆ. ಆದರೆ ಈಗ ಈ ನೋಂದಣಿ ಪುಸ್ತಕದಲ್ಲಿ ಈ ಉಲ್ಲೇಖವನ್ನು ಮತ್ತೊಬ್ಬರ ಕೈಬರಹದಲ್ಲಿ, 2017ಕ್ಕೆ ಸಂಬಂಧಿಸಿ ಬರೆಯಲಾಗಿದೆ. ಅತಿಥಿಗೃಹಕ್ಕೆ ಆಗಮಿಸಿದ ಮತ್ತು ತೆರಳಿದ ದಿನಾಂಕದ ಉಲ್ಲೇಖ ಹೊರತುಪಡಿಸಿ, ಉಳಿದೆಲ್ಲಾ ಮಾಹಿತಿಗಳಲ್ಲಿ ತನ್ನ ಕೈಬರಹವೇ ಇದೆ . ಈ ಬಗ್ಗೆ ತಕ್ಷಣ ಗಮನ ಹರಿಸಿ ತನಿಖೆ ನಡೆಸಬೇಕು ಎಂದು ಪಖಲೆ ದೂರಿನಲ್ಲಿ ತಿಳಿಸಿದ್ದಾರೆ.
‘ದಿ ಕ್ಯಾರವಾನ್’ ಪತ್ರಿಕೆಯಲ್ಲಿ 2017ರ ಡಿಸೆಂಬರ್ 21ರಂದು ಪ್ರಕಟವಾಗಿದ್ದ ವರದಿಯಲ್ಲಿ , ಲೋಯಾ ಅವರು ಅಂತಿಮ ರಾತ್ರಿ ಉಳಿದುಕೊಂಡಿದ್ದ ಅತಿಥಿಗೃಹದ ವಾಸ್ತವ್ಯ ನೋಂದಣಿ ದಾಖಲೆಯಲ್ಲಿ ಕೆಲವೊಂದು ಹಸ್ತಕ್ಷೇಪ ನಡೆಸಿರುವ ಸುಳಿವಿನ ಬಗ್ಗೆ ವಿವರಿಸಲಾಗಿದೆ. ಈ ಕುರಿತು ನಾಗ್‌ಪುರ ಮೂಲದ ವಕೀಲ ಸೂರಜ್ ಲೊಲಗೆ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಉತ್ತರದಲ್ಲಿ ಮಾಹಿತಿ ಇದೆ. ಲೋಯಾ ವಾಸ್ತವ್ಯಕ್ಕೆ ಸಂಬಂಧಿಸಿದ ಎರಡು ಉಲ್ಲೇಖದ ಬಳಿಕ ಮೂರು ಉಲ್ಲೇಖಗಳನ್ನು ಕಾಲಿ ಬಿಡಲಾಗಿದೆ. ಅಲ್ಲದೆ ಈ ಉಲ್ಲೇಖಗಳಿಗಿಂತಲೂ ಮೊದಲು ಬರೆಯಲಾಗಿರುವ ವಿವರದಲ್ಲಿ 2017ರ ದಿನಾಂಕ ನಮೂದಿಸಲಾಗಿದೆ. ಅಲ್ಲದೆ ಅತಿಥಿಗಳ ವಿವರ ಬರೆಯುವ ಕಾಲಂನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮಿಲಿಂದ್ --- ಎಂದು ಬರೆಯಲಾಗಿದೆ. ಇಲ್ಲಿ ಹೆಸರನ್ನು ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿ ಬರೆದಿರುವುದು ಸ್ಪಷ್ಟವಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಯಿಂದ ತಿಳಿದು ಬರುತ್ತದೆ ಎಂದು ಪತ್ರಿಕೆ ತಿಳಿಸಿದೆ.
ಈ ನಿರ್ದಿಷ್ಟ ಉಲ್ಲೇಖದ ಬಗ್ಗೆ ಈಗ ಮಿಲಿಂದ್ ಪಖಲೆ ಸಂಶಯ ವ್ಯಕ್ತಪಡಿಸಿ , ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪಖಲೆ, ಸರಕಾರಿ ದಾಖಲೆಯಲ್ಲಿ 2017ಕ್ಕೆ ಸಂಬಂಧಿಸಿದ ಉಲ್ಲೇಖದ ಬಳಿಕ 2014ರ ಉಲ್ಲೇಖ ಬರಲು ಸಾಧ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.







