ಕ್ರಿಸ್ಮಸ್ ಶುಭಕೋರಿದ ಕುಶಾಲನಗರ ದೇವಾಲಯಗಳ ಒಕ್ಕೂಟ

ಮಡಿಕೇರಿ,ಡಿ.24 :ಧರ್ಮಗಳ ನಡುವೆ ವಿಚ್ಛಿದ್ರಕಾರಿ ಶಕ್ತಿಗಳು ನುಸುಳದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ ಎಂದು ಕುಶಾಲನಗರ ಸಂತ ಸೆಬಾಸ್ಟಿಯನ್ನರ ದೇವಾಲಯದ ಧರ್ಮಗುರುಗಳಾದ ಫಾ.ಮೈಕಲ್ ಮರಿ ಕರೆ ನೀಡಿದ್ದಾರೆ.
ಕ್ರಿಸ್ಮಸ್ ಹಬ್ಬದ ಅಂಗವಾಗಿ ರವಿವಾರ ಸಂಜೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಶುಭ ಕೋರಿದ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸ್ಥಳೀಯ ದೇವಾಲಯಗಳ ಒಕ್ಕೂಟದ ಪ್ರಯತ್ನಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸರ್ವ ಧರ್ಮಗಳ ಸಂದೇಶಗಳನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂದು ಹರಿಸಿದರು.
ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಮಾತನಾಡಿ, ಧರ್ಮಗಳ ನಡುವೆ ಅಂತರ ಸೃಷ್ಠಿಯಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಇದು ಮುಂದುವರೆದಲ್ಲಿ ಆತಂಕ ಎದುರಾಗಲಿದೆ. ಮುಂದಿನ ಪೀಳಿಗೆಗೆ ಉತ್ತಮ ಸಂದೇಶಗಳನ್ನು ನೀಡುವ ಪ್ರಯತ್ನ ಸಾಗಬೇಕಾಗಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್ ಸಮಿತಿಯ ಧ್ಯೇಯೋದ್ದೇಶಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಒದಗಿಸಿದರು.
ಸಮಿತಿ ವತಿಯಿಂದ ಧರ್ಮಗುರುಗಳು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಕ್ರಿಸ್ಮಸ್ ಕೇಕ್ ನೀಡುವ ಮೂಲಕ ಶುಭಾಷಯ ಕೋರಲಾಯಿತು.
ಒಕ್ಕೂಟದ ಗೌರವ ಸಲಹೆಗಾರರಾದ ವಿ.ಎನ್.ವಸಂತಕುಮಾರ್, ಸ್ಥಾಪಕ ಅಧ್ಯಕ್ಷರಾದ ಕೆ.ಆರ್.ಶಿವಾನಂದನ್, ಉಪಾಧ್ಯಕ್ಷರಾದ ಬಿ.ಎಲ್.ಸತ್ಯನಾರಾಯಣ, ಕೆ.ರಾಮದಾಸ್, ವಿ.ಡಿ.ಪುಂಡರೀಕಾಕ್ಷ, ಕೆ.ಕೆ.ದಿನೇಶ್, ನಿರ್ದೇಶಕರುಗಳಾದ ಡಿ.ಟಿ.ವಿಜಯೇಂದ್ರ, ವಿ.ಪಿ.ನಾಗೇಶ್, ರೇಣುಕುಮಾರ್, ಎಂ.ಮುನಿಸ್ವಾಮಿ, ಡಿ.ಆರ್.ಸೋಮಶೇಖರ್, ಕೆ.ಆರ್.ಸುಬ್ರಮಣಿ, ಕೆ.ಓಬುಳ ರೆಡ್ಡಿ, ಸಂತ ಸೆಬಾಸ್ಟಿಯನ್ ದೇವಾಲಯ ಸಮಿತಿ ಉಪಾಧ್ಯಕ್ಷ ಎನ್.ಟಿ.ಜೋಸೆಫ್, ಕಾರ್ಯದರ್ಶಿ ಸವರಿನ್ ಡಿಸೋಜ, ಪ್ರಮುಖರಾದ ಕ್ರಿಜ್ವಲ್ ಕೋಟ್ಸ್, ಫಿಲಿಪ್‍ವಾಸ್, ಅಂಥೋಣಿ ಪ್ರಭುರಾಜ್, ಹ್ಯೂಬರ್ಟ್ ಡಯಾಸ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು ಹಾಜರಿದ್ದರು.







