ದೊಡ್ಡಮನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕ ನೇಣಿಗೆ ಶರಣು

ಮೈಸೂರು,ಡಿ.24: ತನ್ನ ತಾಯಿಯ ಸ್ವಂತ ಅಕ್ಕನ ಮಗಳನ್ನು ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕು ಕೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುತ್ತೂರು ನಿವಾಸಿ ರಸಿಕ (23) ನೇಣಿಗೆ ಶರಣಾದ ಯುವಕ. ಈತ ಸಂಬಂಧದಲ್ಲಿ ಸಹೋದರಿಯಾಗಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ಕುಟುಂಬದವರು ಆತನಿಗೆ ಬುದ್ಧಿ ಹೇಳಿ, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಕುಟುಂಬಸ್ಥರ ವಿರೋಧವನ್ನು ಲೆಕ್ಕಿಸದೇ ಕಳೆದ ಮೂರು ತಿಂಗಳ ಹಿಂದೆ ರಸಿಕ ಹಾಗೂ ಕಾವ್ಯ ನಂಜನಗೂಡಿನ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಕೆಲ ದಿನಗಳ ಹಿಂದೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಇಬ್ಬರು ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಈತ ಪತ್ನಿಯ ಸ್ವಗ್ರಾಮ ಕೋಚನಹಳ್ಳಿಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನಿಂದ ಕುಟುಂಬ ಶೋಕದಲ್ಲಿ ಮುಳುಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





