ಬೆದರಿಕೆ ಕರೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯ
ಚಿಕ್ಕಮಗಳೂರು, ಡಿ.24: ಶಿಕ್ಷಣ ತಜ್ಞ ಡಾ. ನಿರಂಜನ ಆರಾ್ಯ ಅವರಿಗೆ ಬೆದರಿಕೆ ಕರೆಮಾಡುತ್ತಿರುವ ಆರೋಪಿ ಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕ ಮಗಳೂರು ತಾಲೂಕು ಎಸ್‌ಡಿಎಂಸಿ ಸಿಎಫ್ ಸಮನ್ವಯ ವೇದಿಕೆ ಒತ್ತಾಯಿಸಿದೆ.
ವೇದಿಕೆಯ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೇದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಡಾ.ನಿರಂಜನ ಆರಾಧ್ಯ ಅವರು ಎಸ್‌ಡಿಎಂಸಿಎಫ್‌ನ ಸಮನ್ವಯ ವೇದಿಕೆ ಮಹಾ ಪೋಷಕರಾಗಿದ್ದು, ಖಾಸಗಿ ಶಾಲೆಗಳಿಗೆ ಸರಕಾರ ಕೊಡುತ್ತಿರುವ ಆರ್‌ಟಿಇ ಮರುಪಾವತಿ ಶುಲ್ಕವನ್ನು ಸ್ಥಗಿತಗೊಳಿಸಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರಕಾರಿ ಶಾಲೆಗಳ ಎಸ್‌ಡಿಎಂಸಿ ಪರ ಹೋರಾಟ ನಡೆಸುವವರನ್ನು ಮಟ್ಟ ಹಾಕುವ ಷಡ್ಯಂತ್ರ ಇದಾಗಿದೆ. ಆದ್ದರಿಂದ ಇಂತಹ ಕರೆ ಮಾಡುತ್ತಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಮನ್ವಯ ವೇದಿಕೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ವಿಜಯಕುಮಾರ್, ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್, ಎಂ.ಟಿ.ಜಗದೀಶ್ ಮರಬೈಲ್, ಆಟೊ ಚಾಲಕರ ಸಂಘದ ಉಪಾಧ್ಯಕ್ಷ ಚೇತನ್, ಕೃಷ್ಣಮೂರ್ತಿ ಮತ್ತಿತರರಿದ್ದರು.







