ಸ್ವಾಮೀಜಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಡಿ. 24: ‘ಲಿಂಗಾಯತ ಮಹಿಳೆಯರು ತಾಳಿ ತೆಗೆಯಬೇಕು, ಕುಂಕುಮ ಅಳಿಸಬೇಕು’ ಎಂದು ಬಸವನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ಬಸವ ಸೇನಾ ಸಂಘಟನೆಯ ಕಾರ್ಯಕರ್ತರು ನಗರದ ಮೌರ್ಯ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು.
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸ್ವಾಮೀಜಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಡಿ. 12 ರಂದು ಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ ಮಹಿಳೆಯರ ಕುರಿತ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ಮಹಿಳೆಯರ ಮೇಲೆ ಶಿವಪ್ರಕಾಶ ಸ್ವಾಮೀಜಿ ಹಾಗೂ ಪಂಚಪೀಠಾಧೀಶರ ಬೆಂಬಲಿಗರು ನಡೆಸಿರುವ ಕೃತ್ಯ ಅತ್ಯಂತ ಹೇಯವಾದುದ್ದು ಮತ್ತು ಇದನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಮಹಿಳೆಯರ ಕುರಿತು ಅವಹೇಳನಕಾರಿ ಮಾತನಾಡಿರುವ ಹಾಗೂ ಪ್ರತಿಭಟನೆಯಲ್ಲಿ ತೊಡಗಿರುವ ಮಹಿಳೆಯರ ಮೇಲೆ ಹಲ್ಲೆಗೆ ಕಾರಣರಾಗಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಸ್ವಾಮೀಜಿ ಹೇಳಿಕೆಗೆ ಕುಮ್ಮಕ್ಕು ನೀಡಿರುವ ಪಂಚಪೀಠಾಧೀಶರು, ವಿಜಯಪುರದ ಘಟನೆ ಕುರಿತು ತಕ್ಷಣ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಈ ಪಂಚಪೀಠಾಧೀಶರಿಗೆ ಮಹಿಳೆಯರೇ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಿಳಾ ಪ್ರತಿನಿಧಿಗಳು ಎಚ್ಚರಿಕೆ ನೀಡಿದರು.







