ಬಾಂಗ್ಲಾಕ್ಕೆ ಶರಣಾದ ಭಾರತ ರನ್ನರ್ಸ್-ಅಪ್
ಸ್ಯಾಫ್ ಅಂಡರ್-15 ಮಹಿಳಾ ಟೂರ್ನಿ

ಢಾಕಾ, ಡಿ.24: ಸ್ಯಾಫ್ ಅಂಡರ್-15 ಮಹಿಳಾ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ 0-1 ಅಂತರದಿಂದ ಸೋತಿರುವ ಭಾರತ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟಿದೆ.
ರವಿವಾರ ಇಲ್ಲಿ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ಪರ ಶಂಸನ್ ನಹಾರ್ 41ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ತಂಡದ ಗೆಲುವಿಗೆ ನೆರವಾದರು.
ಭಾರತ,ಬಾಂಗ್ಲಾದೇಶ, ನೇಪಾಳ ಹಾಗೂ ಭೂತಾನ್ ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಿವೆ. ಭಾರತ ಗ್ರೂಪ್ ಹಂತದಲ್ಲಿ ಭೂತಾನ್ ಹಾಗೂ ನೇಪಾಳದ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು ಆದರೆ, ಆತಿಥೇಯ ಬಾಂಗ್ಲಾದೇಶ ವಿರುದ್ಧ 0-3 ಅಂತರದಿಂದ ಸೋತಿತ್ತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಕ್ರಿತಿನಾ ದೇವಿ, ಪ್ರಿಯಾಂಕಾದೇವಿ ಹಾಗೂ ಪ್ರತೀಕ್ಷಾ ಲಾಕ್ರ ಅವರ ತಲಾ 1 ಗೋಲು ನೆರವಿನಿಂದ ಭಾರತ ತಂಡ ಭೂತಾನ್ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಭಾರತ ತನ್ನ ಎರಡನೇ ಗ್ರೂಪ್ ಪಂದ್ಯದಲ್ಲಿ ನೇಪಾಳದ ವಿರುದ್ಧ 10-0 ಅಂತರದಿಂದ ಜಯ ಸಾಧಿಸಿತ್ತು. ಪ್ರಿಯಾಂಕಾದೇವಿ ಹಾಗೂ ಸುನೀತಾ ತಲಾ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು. ಫೈನಲ್ ತಲುಪಿದ್ದ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ಗ್ರೂಪ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿತ್ತು. ಆದರೆ, ಫೈನಲ್‌ನಲ್ಲಿ ಎಡವಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.







