ಭಾರತಕ್ಕೆ ಮೂರು ಚಿನ್ನ
ಕಝಕ್ ಬಾಕ್ಸಿಂಗ್ ಟೂರ್ನಮೆಂಟ್

ಹೊಸದಿಲ್ಲಿ, ಡಿ.24: ಕಝಕಿಸ್ತಾನದ ಕರಗಂಡದಲ್ಲಿ ರವಿವಾರ ಕೊನೆಗೊಂಡ ಕಝಕ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಬಾಕ್ಸರ್‌ಗಳು ಮೂರು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕ ಜಯಿಸಿ ಪ್ರಾಬಲ್ಯ ಸಾಧಿಸಿದರು.
ಮೂರು ಬಾರಿಯ ಕಿಂಗ್ಸ್ ಕಪ್ ಚಾಂಪಿಯನ್ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿಯನ್ ರೈಲ್ವೇಸ್‌ನ ಶ್ಯಾಮ್‌ಕುಮಾರ್(49ಕೆ.ಜಿ), ವಿಶ್ವ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ವಿಜೇತ ನಮನ್ ತನ್ವರ್(91 ಕೆಜಿ.) ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ವಿಜೇತ ಸತೀಶ್ ಕುಮಾರ್(+91ಕೆ.ಜಿ.) ಚಿನ್ನದ ಪದಕ ಗೆದ್ದುಕೊಂಡರು.
19ರ ಹರೆಯದ ನಮನ್ ತನ್ವರ್ ಟೂರ್ನಮೆಂಟ್‌ನ ಶ್ರೇಷ್ಠ ಬಾಕ್ಸರ್ ಪ್ರಶಸ್ತಿಯನ್ನು ಗೆದ್ದು ಗಮನ ಸೆಳೆದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ವಿಜೇತ ಬಾಕ್ಸರ್ ಮನ್‌ದೀಪ್ ಜಾಂಗ್ರಾ ಮೊದಲ ಬಾರಿ ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಮಿಡ್ಲ್‌ವೇಟ್(75 ಕೆ.ಜಿ.)ವಿಭಾಗದಲ್ಲಿ ಸ್ಪರ್ಧಿಸಿದ್ದು, ಸೆಮಿಫೈನಲ್‌ನಲ್ಲಿ ಸೋತ ಹಿನ್ನೆಲೆಯಲ್ಲಿ ಕಂಚಿಗೆ ತೃಪ್ತಿಪಟ್ಟರು.
ವರ್ಷಾಂತ್ಯದ ಟೂರ್ನಮೆಂಟ್‌ನಲ್ಲಿ ಐದು ಇಂಟರ್‌ನ್ಯಾಶನಲ್ ಹಾಗೂ 15 ಸ್ಥಳೀಯ ತಂಡಗಳ ಒಟ್ಟು 154 ಬಾಕ್ಸರ್‌ಗಳು ಭಾಗವಹಿಸಿದ್ದರು.







