ಟ್ವೆಂಟಿ-20ಗೆ ಪಾದಾರ್ಪಣೆಗೈದ ಕಿರಿಯ ಆಟಗಾರ ಸುಂದರ್

ಮುಂಬೈ, ಡಿ.24: ತಮಿಳುನಾಡಿನ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಶ್ರೀಲಂಕಾ ವಿರುದ್ಧ ರವಿವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾದಾರ್ಪಣೆಗೈದರು.
18 ರ ಹರೆಯದ ಸುಂದರ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ದಿಲ್ಲಿ ರಣಜಿ ತಂಡದ ನಾಯಕ ರಿಷಬ್ ಪಂತ್ ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ತನ್ನ 19ನೇ ವರ್ಷದಲ್ಲಿ ಟ್ವೆಂಟಿ-20 ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದು, ಇದೀಗ ಸುಂದರ್ ಆ ದಾಖಲೆಯನ್ನು ಮುರಿದಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪಂತ್ ತನ್ನ ಮೊದಲ ಪಂದ್ಯದಲ್ಲಿ ಔಟಾಗದೆ 5 ರನ್ ಗಳಿಸಿದ್ದರು. ಫೀಲ್ಡಿಂಗ್‌ನಲ್ಲಿ ಒಂದು ಕ್ಯಾಚ್ ಪಡೆದಿದ್ದರು. ಧೋನಿ ವಿಕೆಟ್‌ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದ ಕಾರಣ ಪಂತ್‌ಗೆ ಕೀಪಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ರವಿವಾರ ಶ್ರೀಲಂಕಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಎಲ್ಲ 4 ಓವರ್ ಬೌಲಿಂಗ್ ಮಾಡಿದ ಸುಂದರ್ 22 ರನ್‌ಗೆ 1 ವಿಕೆಟ್ ಉರುಳಿಸಿದರು. 11 ಡಾಟ್ ಬಾಲ್ ಎಸೆದಿದ್ದ ಅವರು ಲಂಕೆಗೆ ಕೇವಲ 3 ಬೌಂಡರಿ ಬಿಟ್ಟುಕೊಟ್ಟಿದ್ದರು.
ಸುಂದರ್ ಫಾರ್ಮ್‌ನಲ್ಲಿರುವ ಲಂಕಾ ಆಟಗಾರ ಕುಶಾಲ್ ಪೆರೇರ ವಿಕೆಟ್‌ನ್ನು ಪಡೆದರು. ಪೆರೇರ ಇಂದೋರ್‌ನಲ್ಲಿ ನಡೆದ ಎರಡನೇ ಟ್ವೆಂಟಿ-20ಯಲ್ಲಿ 77 ರನ್ ಗಳಿಸಿದ್ದರು.
ಭಾರತ ತಂಡ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೆ ಮತ್ತೊಂದು ಅವಕಾಶ ನೀಡಿದೆ. ಸಿರಾಜ್ ರಾಜ್‌ಕೋಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಮೊದಲ ಪಂದ್ಯ ಆಡಿದ್ದರು.
ಜಸ್‌ಪ್ರಿತ್ ಬುಮ್ರಾ ಹಾಗೂ ಯಜುವೇಂದ್ರ ಚಹಾಲ್‌ಗೆ ವಿಶ್ರಾಂತಿ ನೀಡಲಾಗಿದೆ. ಎಡಗೈ ವೇಗಿ ಜೈದೇವ್ ಉನದ್ಕಟ್ ಭಾರತದ ಬೌಲಿಂಗ್ ದಾಳಿಯ ನಾಯಕತ್ವವಹಿಸಿಕೊಂಡಿದ್ದು ಉನದ್ಕಟ್‌ಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರೆ.
ಶ್ರೀಲಂಕಾ ತಂಡ ಕಟಕ್ ಹಾಗೂ ಇಂದೋರ್‌ನಲ್ಲಿ ನಡೆದ ಮೊದಲೆರಡು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತಕ್ಕೆ ಕ್ರಮವಾಗಿ 180 ಹಾಗೂ 260 ರನ್ ಬಿಟ್ಟುಕೊಟ್ಟಿತ್ತು. ಶ್ರೀಲಂಕಾ ತಂಡ ಮೂರನೇ ಪಂದ್ಯದಲ್ಲಿ 2 ಬದಲಾವಣೆ ಮಾಡಿತು. ಗಾಯಗೊಂಡಿರುವ ಆ್ಯಂಜೆಲೊ ಮ್ಯಾಥ್ಯೂಸ್‌ರನ್ನು ತಂಡದಿಂದ ಹೊರಗಿಡಲಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಡಿ.ಗುಣತಿಲಕ ಹಾಗೂ ಆಲ್‌ರೌಂಡರ್ ಡಿ.ಶನಕ ಅಂತಿಮ 11ರ ಬಳಗ ಸೇರಿದ್ದಾರೆ.







