ಶಿಕ್ಷಣ ಅಂಕ ಮತ್ತು ಗ್ರೇಡ್‍ಗಳಿಗೆ ಸೀಮಿತವಲ್ಲ: ಶಿಲ್ಪಾರಾಜಶೇಖರ್
ವಾಸವಿ ವಿದ್ಯಾಸಂಸ್ಥೆಯ 36ನೆಯ ಶಾಲಾ ವಾರ್ಷಿಕೋತ್ಸವ

ಚಿಕ್ಕಮಗಳೂರು, ಡಿ.25: ಶಿಕ್ಷಣ ಅಂಕ ಮತ್ತು ಗ್ರೇಡ್‍ಗಳಿಗೆ ಸೀಮಿತವಲ್ಲ. ಒಳಿತು ಕೆಡಕನ್ನು ಅರಿಯುವ ವಿವೇಚನೆಯನ್ನು ಬೆಳೆಸಬೇಕು ಎಂದು ನಗರಸಭಾ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಕರೆ ನೀಡಿದರು.
ಅವರು ನಗರದ ವಾಸವಿ ವಿದ್ಯಾಸಂಸ್ಥೆಯ 36ನೆಯ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವಾಂಗೀಣ ವಿಕಾಸವೇ ನಿಜವಾದ ಶಿಕ್ಷಣ. ವಾಸವಿ ಸಂಸ್ಥೆ ಮೂರೂವರೆ ದಶಕಗಳಿಂದ ಒಳ್ಳೆಯ ಶಿಕ್ಷಣ ನೀಡುತ್ತಿದೆ. ಪ್ರತಿ ಮಕ್ಕಳಲ್ಲೂ ಉನ್ನತವಾದ ಗುರಿ ಇರಬೇಕು. ಅದನ್ನು ಸಾಧಿಸುವ ಪ್ರಯತ್ನ, ಛಲ ಅಗತ್ಯ. ಆಸಕ್ತ ವಿಷಯಗಳನ್ನು ಆರಿಸಿಕೊಳ್ಳುವುದರಲ್ಲಿ ಜಾಣತನವಿದೆ. ಇಂದು ಇಂಜಿನಿಯರ್-ಡಾಕ್ಟರ್‍ಗಳಿಗಷ್ಟೇ ಅಲ್ಲ ಅನೇಕ ರಂಗಗಳಲ್ಲಿ ವಿಫುಲವಾದ ಅವಕಾಶಗಳಿವೆ. ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಕಲಿತವರಿಗೂ ಸಾಧನೆಯ ಅವಕಾಶವಿದೆ ಎಂದು ಹೇಳಿದರು.
ನಾಟ್ಯ, ಸಂಗೀತ, ನಾಟಕ ಚಿತ್ರಕಲೆಯಲ್ಲೂ ಬದುಕು ಕಟ್ಟಿಕೊಳ್ಳಬಹುದೆಂಬುದು ಸಾಬೀತಾಗಿದೆ. ದೇಶವನ್ನು ಪ್ರೀತಿಸುವ ಮನಸ್ಥಿತಿ ನಮ್ಮದಾಗಬೇಕು. ಮನೆ, ಶಾಲೆ ಹಾಗೂ ದೇಶಕ್ಕೆ ಕೀರ್ತಿ ತರುವ ಆಶಯಗಳನ್ನು ಮಕ್ಕಳಲ್ಲಿ ಭಿತ್ತಬೇಕು ಎಂದ ಶಿಲ್ಪಾ, ಗುರು ಹಿರಿಯರನ್ನು ಗೌರವಿಸುವ, ಸುತ್ತಲ ಪರಿಸರವನ್ನು ಸ್ವಚ್ಛವಾಗಿಸುವ ಮನಸ್ಥಿತಿಯನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮು ಶೈಕ್ಷಣಿಕ ವಲಯದ ಸಾಧಕರನ್ನು ಗೌರವಿಸಿ ಮಾತನಾಡಿ ಪೋಷಕರು ಟಿ.ವಿ. ಮತ್ತು ಮೊಬೈಲ್‍ಗಳಿಂದ ಮಕ್ಕಳನ್ನು ದೂರವಿಟ್ಟು, ಪುಸ್ತಕಗಳ ಸಮೀಪವಿರುವಂತೆ ಮಾಡಿದರೆ ಮಕ್ಕಳನ್ನು ಸುಶಿಕ್ಷಿತರಾಗಿಸಬಹುದು. ಎಲ್ಲ ವರ್ಗದ ಪ್ರಜೆಗಳಿಗೆ ಉತ್ಕøಷ್ಟವಾದ ಶಿಕ್ಷಣ ನೀಡಬೇಕೆಂಬ ಸರ್ಕಾರದ ಆಶಯಗಳಿಗೆ ಅನುಗುಣವಾಗಿ ವಾಸವಿ ವಿದ್ಯಾಸಂಸ್ಥೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ವಾಸವಿ ವಿದ್ಯಾಲಯದ ಅಧ್ಯಕ್ಷ ಎಂ.ಆರ್.ರಾಜಶೇಖರ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಿಕೆಯಷ್ಟೇ ಅಲ್ಲ ಆಟೋಟಸ್ಪರ್ಧೆ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಸಾಮಾನ್ಯ ಮಕ್ಕಳನ್ನು ಸೇರಿಸಿಕೊಂಡು ಉತ್ತಮ ಫಲಿತಾಂಶ ತರಲಾಗುತ್ತಿದೆ. 25ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಇಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿದ್ದು ಸುಮಾರು 20ಬಾರಿ ಶೇ.100 ಫಲಿತಾಂಶ ಲಭ್ಯವಾಗಿದೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಯಂತಿಶೇಖರ್ ಸ್ವಾಗತಿಸಿ, ಸಹಕಾರ್ಯದರ್ಶಿ ದಿನೇಶ್‍ಗುಪ್ತ ವಂದಿಸಿದರು. ಮುಖ್ಯಶಿಕ್ಷಕ ಬಿ.ಆರ್.ಕುಮಾರ್ ವಾರ್ಷಿಕವರದಿ ಮಂಡಿಸಿದರು. ಶಿಕ್ಷಕ ರಮೇಶ್‍ಬೊಂಗಾಳೆ ಶೈಕ್ಷಣಿಕಸಾಧಕರನ್ನು ಪರಿಚಯಿಸಿದರು. ಖಜಾಂಚಿ ಪಿ.ಎಸ್.ವೆಂಕಟೆಶ್ ಮತ್ತಿತರರು ವೇದಿಕೆಯಲ್ಲಿದ್ದರು. ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆಯಿತು. ಶಿಕ್ಷಕಿಯರಾದ ಚೂಡಾಮಣಿ ಮತ್ತು ನೂರ್‍ಸಲ್ಮಾನ್ ನಿರೂಪಿಸಿದರು.







