ಜಗತ್ತು ಪ್ರೀತಿ, ಕರುಣೆ ಶಾಂತಿಯ ದ್ಯೋತಕವಾಗಲಿ ಎಂದು ಏಸು ಕ್ರಿಸ್ತರ ಸಂದೇಶವಾಗಿತ್ತು: ರೆ.ಪಾ.ವಿನ್ಸೆಂಟ್ ಡಿಸೋಜ

ಬಣಕಲ್, ಡಿ. 25: ಏಸುಕ್ರಿಸ್ತರು ಮಾನವನ ಪಾಪ ವಿಮೋಚನೆಗಾಗಿ ಮಾನವ ರೂಪದಲ್ಲಿ ಜನ್ಮ ತಳೆದ ಮಾನವತಾವಾದಿಯಾಗಿದ್ದಾರೆ. ಪ್ರೀತಿ, ಶಾಂತಿ, ಐಕ್ಯತೆಯ ಸಂದೇಶವನ್ನು ಜಗಕ್ಕೆ ತಂದು ಜನರು ಮಾನವೀಯತೆಯಿಂದ ನಡೆಯಲು ಪ್ರೇರೆಪಿಸಿದರು. ಜಗತ್ತು ಪ್ರೀತಿ, ಕರುಣೆ ಶಾಂತಿಯ ದ್ಯೋತಕವಾಗಲಿ ಎಂದು ಏಸು ಕ್ರಿಸ್ತರ ಸಂದೇಶವಾಗಿತ್ತು ಎಂದು ಧರ್ಮಗುರು ರೆ.ಪಾ.ವಿನ್ಸೆಂಟ್ ಡಿಸೋಜ ಹೇಳಿದರು.
ಅವರು ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್‍ನಲ್ಲಿ ಕ್ರಿಸ್‍ಮಸ್ ಈವ್ ಸಂದೇಶದಲ್ಲಿ ಮಾತನಾಡಿದರು. ಜಗದ ರಕ್ಷಣೆಗಾಗಿ ಏಸುಕ್ರಿಸ್ತರು ಮಾನವನಾಗಿ ತ್ಯಾಗದ ಜೀವನ ನಡೆಸಿದ್ದಾರೆ. ದೇವ ಮಾನವನಿಗೆ ಜನಿಸಲು ಸ್ಥಳ ಸಿಗದೇ ಕುರಿಮಂದೆಗಳ ಗೋದಲಿಯಲ್ಲಿ ಜನಿಸಬೇಕಾಯಿತು. ಹಾಗಾಗಿ ಜನಸಾಮಾನ್ಯರಾದ ನಾವು ಸಮಾಜದಲ್ಲಿ ಪಾಪ ವಿಮುಕ್ತ ನಿಷ್ಕಳಂಕ ಜೀವನ ನಡೆಸಿ ಇತರರಿಗೆ ಮಾರ್ಗಧರ್ಶಕರಾಗಬೇಕು. ಉತ್ತಮ ಬದುಕು ಸಾಗಿಸಲು ನೆರವಾಗಬೇಕು ಎಂದರು.
ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೌಸಿಹೌಸಿ ಗೇಮ್ಸ್ ಮತ್ತು ಲಕ್ಕಿಡಿಪ್ ಡ್ರಾ ಫಲಿತಾಂಶದ ಕಾರ್ಯಕ್ರಮ ನಡೆಯಿತು. ಸ್ಟಾರ್ ಮಾಡುವ ಸ್ಪರ್ಧೆಯಲ್ಲಿ ಅರುಣ್‍ಮೊಂತೆರೊ ಪ್ರಥಮ ಹಾಗೂ ಅನಿಶಾಮೊಂತೆರೊ ದ್ವಿತೀಯ ಸ್ಥಾನ ಪಡೆದರೆ, ಲಕ್ಕಿಡಿಪ್ ಫಲಿತಾಂಶದಲ್ಲಿ ಮೊದಲ ನೋಕಿಯ ಮೊಬೈಲ್ ಪೋನ್ ಬಹುಮಾನ 2966 ಸಂಖ್ಯೆಗೆ ಹೋದರೆ, 2ನೇ ಬಹುಮಾನವು 25 ಕೆ.ಜಿ ಅಕ್ಕಿಮೂಟೆ 500 ಸಂಖ್ಯೆಗೆ ಹೋಗಿದ್ದು, 3ನೇ ಬಹುಮಾನ ಕ್ರಿಸ್‍ಮಸ್ ಕೇಕ್ 817 ಲಾಟರಿ ಸಂಖ್ಯೆಗೆ ಬಂದಿತು.
ಹೌಸಿಹೌಸಿ ಗೇಮ್ಸ್‍ನಲ್ಲಿ ಪ್ರಥಮ ಡೆನಿಸ್ ಲಸ್ರಾದೊ, 2ನೇ ಬಹುಮಾನ ಮಾರ್ಕ್‍ಮೊಂತೆರೊ, 3ನೇ ಬಹುಮಾನ ವಿನಿತ ಲೋಬೊ ಗಿಟ್ಟಿಸಿಕೊಂಡರು. ಅತಿ ಹೆಚ್ಚು ಟಿಕೆಟ್ ಪುಸ್ತಕ ಮಾರಿದವರಿಗೆ ಮೊದಲ ಬಹುಮಾನವನ್ನು ಚರ್ಚ್ ಅಧ್ಯಕ್ಷ ಸಿಲ್ವೆಸ್ಟರ್ ಪಿರೇರಾ ಪಡೆದರೆ ಎರಡನೇ ಬಹುಮಾನ ತೆರೆಸ್ಸಿಯ ಬೇಬಿ ಇವರು ಪಡೆದರು. ಹಬ್ಬದ ಸಂಭ್ರಮದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕ್ರೈಸ್ತ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಿಸ್‍ಮಸ್ ಸಂಭ್ರಮ ಮೆರೆದರು.
ಬಣಕಲ್ ಬಾಲಿಕಾ ಮರಿಯ ಚರ್ಚ್‍ನಲ್ಲಿ ನಡೆದ ಕ್ರಿಸ್‍ಮಸ್ ಸಂಭ್ರಮದ ವಿಶೇಷ ಪೂಜೆಯಲ್ಲಿ ಧರ್ಮಗುರು ರೆ,ಪಾ.ಆಲ್ಬರ್ಟ್ ಡಿಸಿಲ್ವ ಮಾತನಾಡಿ, ಕ್ರೈಸ್ತರು ಕ್ರಿಸ್ತರ ಆದರ್ಶ ಪಾಲಿಸಿ ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸಿ ಸಜ್ಜನ ನಾಗರಿಕರಾಗಿ ಬದುಕಬೇಕು. ಆಡಂಬರದಿಂದ ಜೀವನ ನಡೆಸದೇ ಸಮಾಜದಲ್ಲಿ ಸರ್ವರಿಗೂ ಅನುಕೂಲವಾಗುವ ರೀತಿಯಲ್ಲಿ ನಡೆಯಬೇಕು. ಕ್ರಿಸ್ತರ ತ್ಯಾಗ, ಪ್ರೀತಿ, ಶಾಂತಿಯ ಮಂತ್ರಗಳೇ ನಮಗೆ ಜೀವನ ನಡೆಸಲು ದಾರಿ ತೋರಿಸುತ್ತವೆ. ಕ್ರಿಸ್ತರ ಆದರ್ಶಗುಣಗಳನ್ನು ಪಾಲಿಸಿ ಉತ್ತಮ ಕ್ರೈಸ್ತರರಾಗಿ ಬದುಕಲು ಕರೆ ನೀಡಿದರು.
ಕೊಟ್ಟಿಗೆಹಾರ ಮತ್ತು ಬಣಕಲ್ ಚರ್ಚ್‍ಗಳು ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಕ್ರಿಸ್ತನ ಜನನದ ವೃತ್ತಾಂತದ ಗೋದಲಿಗಳು ಶೃಂಗಾರಗೊಂಡು ಕ್ರಿಸ್ತನ ಜನನದ ಕಥೆಗಳು ಹೇಳುವಂತೆ ಕಂಡು ಬಂದವು. ನೂರಾರು ಕ್ರೈಸ್ತ ಭಕ್ತರು ಚರ್ಚ್‍ನಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಕ್ರಿಸ್‍ಮಸ್ ಗೀತೆಗಳನ್ನು ಹಾಡಿ ಸಂಭ್ರಮ ಮೆರೆದರು. ಕ್ರಿಸ್‍ಮಸ್ ಕಾರ್ಯಕ್ರಮದಲ್ಲಿ ಅತಿಥಿ ಗುರುಗಳಾದ ರೆ.ಪಾ.ಡೆನಿಸ್ ಡಿಸೋಜ ಇದ್ದರು.







