ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ: ಎಸೆಸ್ಸೆಫ್ ಸ್ವಾಗತ
ಮಂಗಳೂರು, ಡಿ.25: ಮಧ್ಯಪ್ರದೇಶ ಮಾದರಿಯಲ್ಲಿ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ನೀಡಿರುವ ಹೇಳಿಕೆಯನ್ನು ಎಸೆಸ್ಸೆಫ್ ಸ್ವಾಗತಿಸಿದೆ.
ಎಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಹೇಳಿಕೆಯೊಂದನ್ನು ನೀಡಿ ‘ಇದು ಕೇವಲ ಚಿಂತನೆಯಾಗಿ ಉಳಿಯದೆ ಶೀಘ್ರ ಶಾಸನವಾಗಿ ಜಾರಿಗೆ ಬರಬೇಕು. ವಿಜಯಪುರದ ದಲಿತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಂದ ಕ್ರೂರಿಗಳು ಗಲ್ಲಿಗೇರುವಂತಾಗಬೇಕು’ ಎಂದು ತಿಳಿಸಿದ್ದಾರೆ.
ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಹೆಚ್ಚಿದೆ. 2012ರ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದ ತ್ವರಿತ ವಿಚಾರಣೆಗೆಂದು ರೂಪಿಸಲಾದ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸಮರ್ಪಕವಾಗಿ ನಡೆಯಬೇಕು. ಕ್ರೂರಿಗಳು ಸಾಕ್ಷಾಧಾರದ ಕೊರತೆ ಅಥವಾ ಅಪ್ರಾಪ್ತ ವಯಸ್ಸಿನ ಲಾಭ ಪಡೆದು ಪಾರಾಗುವಂತಾಗಬಾರದು. ಅತ್ಯಾಚಾರ ಮತ್ತು ಕೊಲೆಗೆ ಮರಣ ದಂಡನೆ ವಿಧಿಸುವ ಮೂಲಕ ಕ್ರೂರಿಗಳಿಗೆ ಕಠಿಣ ಸಂದೇಶ ನೀಡಬೇಕು ಎಂದು ತಿಳಿಸಿದ್ದಾರೆ.





