ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ: ವರ್ತಕರ ಸಂಘ ಆಗ್ರಹ
ಮಂಗಳೂರು, ಡಿ.25: ವಿಜಯಪುರದ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಕೃತ್ಯವು ತೀವ್ರ ಖಂಡನೀಯ. ನಾಗರಿಕ ಸಮಾಜವು ಇದರ ವಿರುದ್ಧ ಜಾತಿ, ಮತ, ಪಕ್ಷ ಪಂಗಡಗಳ ಬೇಧವಿಲ್ಲದೆ ಧ್ವನಿ ಎತ್ತಬೇಕು. ಅತ್ಯಾಚಾರ ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿರುವವರನ್ನು ಯಾವುದೇ ಲಾಬಿಗೆ ಮಣಿಯದೆ ಬಂಧಿಸಿ ತ್ವರಿತ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.
ಹೆಣ್ಣು ಮಕ್ಕಳು ಒಂಟಿಯಾಗಿ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕ್ರಮ ಕೈಗೊಂಡರೆ, ನಾಗರಿಕ ಸಮಾಜ ಕೂಡ ಇಂತಹ ದುಷ್ಕರ್ಮಿಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿರುವ ಅಲಿ ಹಸನ್, ಮಧ್ಯಪ್ರದೇಶ ಮಾದರಿಯಲ್ಲಿ ಅತ್ಯಾಚಾರಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವುದು ಮಾತ್ರ ಗುರಿಯಾಗಬಾರದು. ನಾಗರಿಕ ಸಮಾಜವು ಇದನ್ನು ಪಾಠವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.





