ಯಕ್ಷಗಾನಕ್ಕೆ ಮಹಿಳೆಯರ ಕೊಡುಗೆ ಅಪಾರ : ವಿದ್ವಾನ್ ರಘುಪತಿ ಭಟ್

ಪುತ್ತೂರು,ಡಿ.25: ಗಂಡು ಮೆಟ್ಟಿನ ಕಲೆಯೆಂದೇ ಕರೆಸ್ಪಡುತ್ತಿರುವ ಯಕ್ಷಗಾನ ಕೇವಲ ಪುರುಷರಿಗೆ ಸೀಮಿತವಾಗಿಲ್ಲ ಪ್ರಸ್ತುತ ಅನೇಕ ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಕೊಂಡಿದ್ದು, ಮಹಿಳಾ ಕಲಾವಿದೆಯರೂ ಯಕ್ಷಗಾನ ಕಲೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಸಂಸ್ಕೃತ ಉಪನ್ಯಾಸಕ ವಿದ್ವಾನ್ ರಘುಪತಿ ಭಟ್ ಹೇಳಿದರು.
ಅವರು ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ 49ನೇ ವಾರ್ಷಿಕ ಉತ್ಸವ `ಶ್ರೀ ಆಂಜನೇಯ -49' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಂಡು ಮೆಟ್ಟಿನ ಕಲೆ ಎಂಬ ಶಬ್ದವನ್ನು ಪುರುಷವಾಚಕವಾಗಿ ಬಳಕೆ ಬಂದಿಲ್ಲ. ಆದರೆ ಅದೊಂದು ಹೆಗ್ಗಳಿಕೆಯ, ಪೌರುಷದ ಅಗ್ರಮಾನ್ಯ ಕಲೆ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಆದರೆ ಈ ಶಬ್ದದ ವಾಚ್ಯಾರ್ಥವನ್ನು ಪರಿಗಣಿಸಿದರೂ ಇವತ್ತು ಯಕ್ಷಗಾನ ಪುರುಷರಿಗೆ ಸೀಮಿತವಾಗಿಲ್ಲ. ಅನೇಕ ಮಹಿಳೆಯರು ಈ ಕಲೆಯಲ್ಲಿ ತೊಡಗಿಕೊಂಡಿದ್ದಾರೆ. ವಿಜೃಂಭಿಸಿದ್ದಾರೆ. ಮಹಿಳಾ ಯಕ್ಷಗಾನ ತಂಡಗಳು ಕೆಲಸ ಮಾಡುತ್ತಿವೆ ಎಂದರು.
ಯಕ್ಷಗಾನ ಕೇವಲ ಒಂದು ಕಲೆಯಲ್ಲ. ಅದು ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಬಂದ ಕಲೆಯಾಗಿದೆ. ಇದನ್ನು ಕೇವಲ ಮನೋರಂಜನಾ ಮಾಧ್ಯಮವಾಗಿ ನೋಡದೆ ಪೌರಾಣಿಕ ಮಹತ್ವನ್ನು ಕರಾವಳಿಯ ಜನ ಯಕ್ಷಗಾನಗಳ ಮೂಲಕವೇ ತಿಳಿದುಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಯಕ್ಷಗಾನದಂಥ ಆಧ್ಯಾತ್ಮಿಕ ಸಿಂಚನ ಉತ್ಕರ್ಷಗೊಳಿಸುವ, ಪ್ರಜ್ಞಾವಂತಿಕೆ, ಜ್ಞಾನ ಹೆಚ್ಚಿಸುವ ಕಲೆಗೆ ಸಮಯ ನೀಡಬೇಕು ಎಂದರು.
ಸುರತ್ಕಲ್ ತಡಂಬೈಲ್‍ನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಅಧ್ಯಕ್ಷೆ ಸುಲೋಚನಾ ವಿ. ರಾವ್ ಮಾತನಾಡಿ ಪುತ್ತೂರಿನಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ 49 ವರ್ಷಗಳಿಂದ ಸಾಧನೆ ಮಾಡುತ್ತಾ ಬಂದಿದೆ. ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ 17 ವರ್ಷಗಳಿಂದ ಕೆಲಸ ಮಾಡುತ್ತಿದೆ. ಇದು ಇಡೀ ಕರಾವಳಿಯ ಯಕ್ಷ ಕಲಾ ಸಂಘಗಳಿಗೆ ಪ್ರೇರಕ ಎಂದರು. ಯಕ್ಷಗಾನವೆಂಬುದು ಕರಾವಳಿಯ ಜನರ ರಕ್ತದಲ್ಲಿ ಬಂದ ಕಲೆ. ಇದರ ಉತ್ತೇಜನಕ್ಕೆ ಇಂಥ ಸಂಘ ಸಂಸ್ಥೆಗಳು ಅಗತ್ಯ ಎಂದರು.
ಹಿರಿಯ ಉದ್ಯಮಿ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್, ಪ್ರಮುಖರಾದ ಪಿ. ರಮಾನಂದ ನಾಯಕ್ ಬೊಳುವಾರು, ದುಗ್ಗಪ್ಪ ಎನ್., ಟಿ. ರಂಗನಾಥ ರಾವ್, ಗುಡ್ಡಪ್ಪ ಬಲ್ಯ, ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಪಿ. ನಾರಾಯಣ ಮಣಿಯಾಣಿ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ `ಯಕ್ಷ-ಸಂಗೀತ-ಗಮಕ' ನಡೆಯಿತು. ಪದ್ಯಾಣ ಗಣಪತಿ ಭಟ್, ನಾರಾಯಣ ಶಬರಾಯ, ಚಂದ್ರಶೇಖರ ಕೆದಿಲಾಯ ಬ್ರಹ್ಮಾವರ, ವಿದುಷಿ ಸುಚಿತ್ರಾ ಹೊಳ್ಳ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಪದ್ಯಾಣ ಶಂಕರಣ ನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ ಸಹಕರಿಸಿದರು. ಮಧ್ಯಾಹ್ನ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದಿಂದ `ಯಕ್ಷ- ದಾನವಿಯರು' ನಡೆಯಿತು.







